
ಕಾಂಗ್ರೆಸ್ ನ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಇಂದು ನಿಧನರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ 94 ವರ್ಷದ ಶಾಮನೂರು ಶಿವಶಂಕರಪ್ಪ ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ 6 ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಪ್ರಮುಖ ಖಾತೆಗಳನ್ನು ನಿಭಾಯಿಸುವ ಮೂಲಕ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ತೋಟಗಾರಿಕೆ ಸಚಿವರಾಗಿದ್ದು ಅವರ ಸೊಸೆ ಪ್ರಭಾ ಮಲ್ಲಿಕಾರ್ಜುನ ಸಂಸದೆಯಾಗಿದ್ದಾರೆ.
ನಗರದಲ್ಲಿ ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಹೈಡ್ರಾಮಾ ನಡೆದಿದ್ದು, ಉದ್ಯಮಿಯೊಬ್ಬರು ಪಬ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ವಿಡಿಯೋ ವೈರಲ್ ಆಗಿದೆ. ಗಲಾಟೆ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಬ್ ಮುಚ್ಚುವ ಸಮಯದಲ್ಲಿ ಸರ್ವಿಸ್ ವಿಚಾರಕ್ಕೆ ಉದ್ಯಮಿ ಸಿಬ್ಬಂದಿಗಳ ಮೇಲೆ ಸಿಟ್ಟಾಗಿದ್ದಾರೆ. ಈ ವೇಳೆ ಸಿಬ್ಬಂದಿಗಳು ತುಂಬಾ ತಾಳ್ಮೆಯಿಂದ, ಅವರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸಿಬ್ಬಂದಿ ಹಾಗೂ ಉದ್ಯಮಿ ನಡುವೆ ವಾಗ್ವಾದ ನಡೆದು, ಪಬ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ. ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದನ್ನು ತಡೆಯಲು ಪಬ್‌ನ ಬೌನ್ಸರ್‌ಗಳು ಪ್ರಯತ್ನಿಸಿದ್ದಾರೆ. ಗಲಾಟೆಯ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.
ಅಂಪಾರ್ಟ್ಮೆಂಟ್ ಮಾಲೀಕ ಕಿರಣ್ ಹೆಬ್ಬಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿ ಬರೆದಿದ್ದ ಪತ್ರಕ್ಕೆ ಡಿಕೆ ಶಿವಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದು ಈಗ ರಾಜ್ಯಾದ್ಯಂತ ಸುದ್ದಿಯಾಗುತ್ತಿದೆ.
ಸರ್ಕಾರಕ್ಕೆ ಪತ್ರ ಬರೆದಿದ್ದ ಕಿರಣ್ ಹೆಬ್ಬಾರ್ ನಮ್ಮಲ್ಲಿ ಬಹುದೊಡ್ಡ ಮತದಾರರ ಸಮೂಹವಿದ್ದು, ಬೆಂಗಳೂರಿನ 1.30 ಕೋಟಿ ಮತದಾರರ ಮೇಲೆ ಪರಿಣಾಮ ಬೀರಬರುವ ಸಾಮರ್ಥ್ಯವಿದೆ. ನಮ್ಮ ಮನವಿ ನಿರ್ಲಕ್ಷಿಸಿದರೆ ಸದ್ಯದಲ್ಲೇ ಜಿಬಿಎ ಚುನಾವಣೆ ಬರುತ್ತಿದೆ ನೋಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಮಾತನಾಡಿದ್ದ ಡಿಕೆ ಶಿವಕುಮಾರ್ ನಾನು ಈ ದೇಶದ ಪ್ರಧಾನಿ ಮತ್ತು ಗೃಹ ಸಚಿವರಿಗೆ ಭಯಪಡದೆ ಜೈಲಿನಿಂದ ಬಂದಿದ್ದೇನೆ ಎಂದು ಹೇಳಿದ್ದರು. ಡಿಕೆ ಶಿವಕುಮಾರ್ ಎಚ್ಚರಿಕೆಗೆ ಪ್ರತಿಕ್ರಿಯೆ ನೀಡಿರುವ ಉದ್ಯಮಿ ಮೋಹನ್‌ದಾಸ್ ಪೈ ನೀವು ನಮ್ಮ ಸಚಿವರು, ನಮ್ಮ ಪ್ರತಿನಿಧಿ ಹೊರತು ನಮ್ಮ ಯಾಜಮಾನನಲ್ಲ. ಮಂತ್ರಿಗಳನ್ನು ಪ್ರಶ್ನಿಸುವ ಹಕ್ಕು ನಮಗಿದೆ. ನಾಗರಿಕರೊಂದಿಗೆ ಈ ರೀತಿ ಮಾತನಾಡುವುದು ಮತ್ತು ಭಯವನ್ನು ಸೃಷ್ಟಿಸುವುದು ತುಂಬಾ ತಪ್ಪು ಎಂದು ಹೇಳಿದ್ದಾರೆ.
ಯೂನಿಫಾರಂ ಹಾಕ್ಕೊಂಡು ರಿಯಲ್ ಪೊಲೀಸ್ ಅಂತ ಬಿಲ್ಡಪ್ ಕೊಟ್ಟು, ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ನಕಲಿ ಪಿಎಸ್‌ಐ ನಾಲ್ವರನ್ನು ಬಂಧಿಸಲಾಗಿದೆ. ಮಲ್ಲಿಕಾರ್ಜುನ, ಪ್ರಮೋದ್, ವಿನಯ್, ಹೃತ್ವಿಕ್ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಪ್ಲಾನ್ ಮಾಡಿ ಮನೆಗೆ ನುಗ್ಗಿ ಬೆದರಿಕೆ ಹಾಕಿ ಹಣ ದೋಚುತ್ತಿದ್ದರು. ಹೀಗೆಯೇ ವ್ಯಕ್ತಿಗೆ ಬೆದರಿಸಿ ಡಕಾಯಿತಿ ಮಾಡಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪಿಎಸ್ಐ ಆಗಬೇಕು ಅಂತ ಮಲ್ಲಿಕಾರ್ಜುನ ಎರಡು ಬಾರಿ ಎಕ್ಸಾಮ್ ಬರೆದಿದ್ದ. ಎರಡು ಬಾರಿಯೂ ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಇಷ್ಟಾದ್ರೂ ಪರೀಕ್ಷೆ ಪಾಸ್ ಆಗಿ ಪಿಎಸ್ಐ ಆಗಿದ್ದೇನೆ ಎಂದು ಊರಲ್ಲಿ ಬಿಂಬಿಸಿದ್ದ.
ರಾಜ್ಯದ ಹಲವೆಡೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜಮೀನಿನಲ್ಲಿ ನೀರು ಹಾಯಿಸಲು ತೆರಳಿದ್ದ ರೈತ, ಕಾಡಾನೆ ದಾಳಿಯಿಂದ ಮೃತಪಟ್ಟ ಘಟನೆ ರಾಮನಗರದ ಹಾರೋಹಳ್ಳಿ ತಾಲೂಕಿನ ದುನ್ನಸಂದ್ರದಲ್ಲಿ ನಡೆದಿದೆ. ಕಾಡು ಪ್ರಾಣಿಗಳ ಹಾವಳಿ ಕುರಿತು ನಿಗಾ ವಹಿಸದ ಅರಣ್ಯಾಧಿಕಾರಿಗಳ ಮೇಲೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ರೈತ ದುಂಡಮಾದ ಕಾಡಾನೆ ದಾಳಿಗೆ ಬಲಿಯಾದ ವ್ಯಕ್ತಿಯಾಗಿದ್ದಾರೆ. ಬೆಳಗಿನ ಜಾವ ಜಮೀನಿಗೆ ನೀರು ಹಾಯಿಸಲು ತೆರಳಿದ್ದ ರೈತನ ಮೇಲೆ ಏಕಾಏಕಿ ಕಾಡಾನೆ ದಾಳಿ ಮಾಡಿದೆ. ಇನ್ನು ಮೈಸೂರಿನ ಹುಣಸೂರಿನ ವಿನೋಬಾ ಗ್ರಾಮದಲ್ಲಿ ಹಸು ಮೇಲೆ ಹುಲಿ ದಾಳಿ ಮಾಡಿದೆ. ಪ್ರಭಾಕರ್ ಎಂಬುವರಿಗೆ ಸೇರಿದ ಹಸು ಹುಲಿ ದಾಳಿಗೆ ಬಲಿಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಊರಿನಲ್ಲಿ ಹುಲಿಯ ಸಂಚಾರದಿಂದ ಗ್ರಾಮಸ್ಥರಲ್ಲಿಯೂ ಆತಂಕ ಹೆಚ್ಚಾಗಿದೆ
Advertisement