

ಬೆಂಗಳೂರು: ಆಳಂದ ವಿಧಾನಸಭಾ ಕ್ಷೇತ್ರದ ಮತಗಳ್ಳತನ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯದಲ್ಲಿ ಸಲ್ಲಿಸಿರುವ ಆರೋಪಪಟ್ಟಿ ಸತ್ಯಾಂಶಗಳಿಂದ ತುಂಬಿದೆ ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಶನಿವರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದೆ ಅವರು, ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವುದು ಸತ್ಯ. ಹೀಗಾಗಿ ಬಿಜೆಪಿ ಮಾಜಿ ಶಾಸಕ ಗುತ್ತೇದಾರ್ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡುವ ಮೂಲಕ ಮತಗಳ್ಳತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಆಳಂದ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಸುಭಾಷ್ ಗುತ್ತೇದಾರ್ ಅವರ ವಿರುದ್ಧ ಸಲ್ಲಿಕೆಯಾಗಿರುವ ಆರೋಪಪಟ್ಟಿ ಕುರಿತ ಪ್ರಶ್ನೆಗೆ ಉತ್ತರಿಸಿ, ಈ ಪ್ರಕರಣದಲ್ಲಿ ಯಾವುದೇ ಮುಚ್ಚು ಮರೆಯಿಲ್ಲ. ಅಕ್ರಮ ನಡೆದಿರುವುದು ಸತ್ಯ. ಗಂಭೀರವಾದ ತನಿಖೆ ನಡೆಸಿ, ಆರೋಪಪಟ್ಟಿ ಸಲ್ಲಿಸಿದ್ದಾರೆ. ಈ ವಿಚಾರದ ಬಗ್ಗೆ ನಮ್ಮ ಶಾಸಕರು ಸದನದಲ್ಲಿ ದನಿ ಎತ್ತಲಿದ್ದಾರೆ. ಇದು ಕೇವಲ ಕರ್ನಾಟಕದ ದನಿಯಲ್ಲ. ಇಡೀ ಭಾರತದ ದನಿ. ಜನರ ಕೃಪೆಯಿಂದ ನಾವು ಇಲ್ಲಿ ಅಧಿಕಾರಕ್ಕೆ ಬಂದಿದ್ದೇವೆ ಎಂದು ತಿಳಿಸಿದರು.
ಪ್ರಕರಣ ತನಿಖೆ ನಡೆಸಿ, ಅಧಿಕಾರಿಗಳು ಕ್ರಮ ತೆಗದುಕೊಂಡಿದ್ದಾರೆ. ಫೋನ್‌ನಲ್ಲಿ ದಾಖಲೆಗಳು ಡಿಲೀಟ್ ಆಗಿವೆ ಎಂದು ಇದೆ. ಇದರ ಬಗ್ಗೆ ವರದಿ ತರಿಸಿಕೊಂಡು ನೋಡಿ ಆ ನಂತರ ಮಾತನಾಡುತ್ತೇನೆ. ರಾಹುಲ್ ಗಾಂಧಿ ಅವರ ಸಲಹೆಯಂತೆ ಲೀಗಲ್ ಬ್ಯಾಂಕ್ ಅನ್ನು ಪ್ರತಿ ಕ್ಷೇತ್ರದಲ್ಲೂ ಪ್ರಾರಂಭ ಮಾಡಬೇಕು. ಈ ವಿಚಾರದ ಬಗ್ಗೆ ನಾವು ಹೋರಾಟ ಮಾಡುತ್ತೇವೆ ಎಂದರು.
Advertisement