

ಬೆಂಗಳೂರು: ಮೊಮ್ಮಕ್ಕಳು ಅಂದ್ರೆ ತಾತ, ಅಜ್ಜಿಗೆ ಎಲ್ಲಿಲ್ಲದ ಪ್ರೀತಿ. ಇನ್ನೂ ಅವರೇನಾದ್ರೂ ಬೇರೆ ಕಡೆ ಇದ್ದು, ಊರಿಗೆ ಬರ್ತಿದ್ದಾರೆ ಅಂತಾ ಸುದ್ದಿ ತಿಳಿದ್ರೆ ಸಾಕು, ಅವರು ಪಡುವ ಸಂಭ್ರಮ, ಅನುಭವಿಸುವ ಖುಷಿ ಹೇಳತೀರದಾಗಿರುತ್ತದೆ.
ಹೀಗೆಯೇ ಬೆಂಗಳೂರಿನಿಂದ ಉಡುಪಿಯ ಹಳ್ಳಿಯೊಂದಕ್ಕೆ ತೆರಳಿದ ಯುವತಿಯನ್ನು ತಾತ, ಬಸ್ ನಿಲ್ದಾಣಕ್ಕೆ ಬಂದು ಕರೆದೊಯ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಮೆಧಾ ಹೊಳ್ಳ ಎಂಬ ಯುವತಿ ಇನ್ಸಾಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋದಲ್ಲಿ, ಮನೆ ಕೇವಲ 50 ಮೀಟರ್ ದೂರದಲ್ಲಿದ್ದರೂ ಮಂದಹಾಸದಿಂದ ಬಸ್ ನಿಲ್ದಾಣಕ್ಕೆ ಬರುವ ತಾತ, ಬ್ಯಾಗ್ ನ್ನು ತನ್ನ ಹೆಗಲಿಗೆ ಹಾಕಿಕೊಂಡು ಆಕೆಯನ್ನು ಮನೆಗೆ ಕರೆದೊಯ್ಯುತ್ತಾರೆ.
ಬಳಿಕ ಮೊಮ್ಮಗಳಿಗಾಗಿ ಮನೆ ಬಾಗಿಲಲ್ಲಿಯೇ ಕಾಯುತ್ತಿದ್ದ ಅಜ್ಜಿ, ಮೊಮ್ಮಗಳನ್ನು ನೋಡಿದ ಕೂಡಲೇ ಉಕ್ಕಿಬರುವ ಸಂತೋಷದೊಂದಿಗೆ ನಗು ಮೊಗದಿಂದ ಬರಮಾಡಿಕೊಳ್ಳುತ್ತಾರೆ. ಪ್ರತಿ ಬಾರಿ ಊರಿಗೆ ಹೋದಾಗಲೂ ತಾತ-ಅಜ್ಜಿ ಇದೇ ರೀತಿ ಮಾಡುವುದಾಗಿ ಮೆಧಾ ಬರೆದುಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅನೇಕ ಮಂದಿ ತಮ್ಮ ತಾತ-ಅಜ್ಜಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ನಿಜವಾದ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಎಂದು ಅನೇಕ ಮಂದಿ ಪ್ರತಿಕ್ರಿಯಿಸುತ್ತಿದ್ದಾರೆ. ಇಂತಹ ತಾತ-ಅಜ್ಜಿ ಪಡೆದ ನೀವು ಪುಣ್ಯವಂತರು ಎಂದು ಕೆಲವರು ಹೇಳುತ್ತಿದ್ದಾರೆ.
Advertisement