

ಬೆಂಗಳೂರು: ಪ್ರೋಟಿನ್ ಮೂಲವಾಗಿರುವ ಮೊಟ್ಟೆ ಅನೇಕರಿಗೆ ಬಹುಪ್ರಿಯ. ಕೇವಲ ನಾನ್ ವೆಜಿಟೇರಿಯನ್ಸ್ ಮಾತ್ರವಲ್ಲದೇ ಕೆಲ ವೆಜಿಟೇರಿಯನ್ಸ್ ಕೂಡ ಮೊಟ್ಟೆಯನ್ನು ಸೇವನೆ ಮಾಡುವುದುಂಟು. ಆದರೆ ಇದೀಗ ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಎದುರಾಗಿದೆ. ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶ ಪತ್ತೆಯಾಗಿರುವ ಬಗ್ಗೆ ಸುದ್ದಿ ಬೆಳಕಿಗೆ ಬಂದಿದೆ.
ಜನಪ್ರಿಯ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ. ಮೊಟ್ಟೆಗಳಲ್ಲಿ ನೈಟ್ರೋಫ್ಯೂರಾನ್ ಎಂಬ ಔಷಧದ ಕಣಗಳು ಕಂಡುಬಂದಿದ್ದು, ಇದು ಡಿಎನ್‌ಎಯಿಂದ ಸಂತಾನೋತ್ಪತ್ತಿ ಅಂಗಗಳು ಮತ್ತು ರೋಗನಿರೋಧಕ ವ್ಯವಸ್ಥೆಗೆ ಎಲ್ಲದಕ್ಕೂ ಹಾನಿ ಮಾಡುತ್ತದೆ. ಅಲ್ಲದೇ ಇದು ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೂ ಕಾರಣವಾಗಬಹುದು ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದು ಮೊಟ್ಟೆ ಪ್ರಿಯರಿಗೆ ಆಘಾತವನ್ನುಂಟು ಮಾಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು, ಈ ಹಿಂದೆ ನಡೆಸಿದ ಪರೀಕ್ಷೆಗಳಲ್ಲಿ ಮೊಟ್ಟೆ ಹಾನಿಕಾರಕ ಅಂಶಗಳು ಕಂಡುಬಂದಿಲ್ಲ. ಆದರೆ, ಈ ಹೊಸ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ, ಲ್ಯಾಬ್‌ಗಳಲ್ಲಿ ಕೂಲಂಕುಷ ಪರೀಕ್ಷೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಪರೀಕ್ಷೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದರೆ, ಮೊಟ್ಟೆ ಉತ್ಪಾದಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಆರು ತಿಂಗಳ ಹಿಂದೆ ಆಹಾರ ಸುರಕ್ಷತಾ ಇಲಾಖೆ ನಡೆಸಿದ ಪರೀಕ್ಷೆಗಳಲ್ಲಿ ಮೊಟ್ಟೆಗಳಲ್ಲಿ ಯಾವುದೇ ಹಾನಿಕಾರಕ ವಸ್ತುಗಳು ಕಂಡುಬಂದಿಲ್ಲ. ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತ ಶ್ರೀನಿವಾಸ್ ಅವರು ಆ ಸಮಯದಲ್ಲಿ ಪ್ರಯೋಗಾಲಯ ವರದಿಗಳು ಮೊಟ್ಟೆಗಳು ಸೇವನೆಗೆ ಸುರಕ್ಷಿತವೆಂದು ಸ್ಪಷ್ಟವಾಗಿ ಹೇಳಿದ್ದಾರೆ.
ಹಿಂದಿನ ವರದಿಗಳ ಆಧಾರದ ಮೇಲೆ ಆಹಾರ ಸುರಕ್ಷತಾ ಇಲಾಖೆಯು ಮೊಟ್ಟೆಗಳು ಸುರಕ್ಷಿತವೆಂದು ಹೇಳಿದೆ. ಇದೀಗ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಹೊಸ ಪರೀಕ್ಷೆಗಳಿಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
Advertisement