

ಬೆಂಗಳೂರು: 2023-24 ರಿಂದ ಇದುವರೆಗೆ ಕರ್ನಾಟಕದಲ್ಲಿ ಒಟ್ಟು 2,809 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯವು ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದು ಸಚಿವ ಎನ್. ಚೆಲುವರಾಯಸ್ವಾಮಿ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೃಷಿ ಸಚಿವರು, 2023-24ರಲ್ಲಿ 1,254 ರೈತರ ಆತ್ಮಹತ್ಯೆಗಳು ವರದಿಯಾಗಿವೆ. 2024-25ರಲ್ಲಿ 1,178 ಮತ್ತು 2025-26ರಲ್ಲಿ ಅಂದರೆ ಪ್ರಸಕ್ತ ವರ್ಷ ಇಲ್ಲಿಯವರೆಗೆ 377 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಪ್ರಕಾರ, ಕರ್ನಾಟಕವು ರೈತರ ಆತ್ಮಹತ್ಯೆಯಲ್ಲಿ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೂ ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಆತ್ಮಹತ್ಯೆ ಪ್ರಕರಣದಲ್ಲಿ ಇಳಿಕೆ ಕಂಡುಬಂದಿದೆ ಎಂದರು.
ಸಚಿವರು ಸದನದಲ್ಲಿ ನೀಡಿದ ದತ್ತಾಂಶದ ಪ್ರಕಾರ, ಹಾವೇರಿಯಲ್ಲಿ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 297 ಪ್ರಕರಣಗಳು, ನಂತರ ಬೆಳಗಾವಿಯಲ್ಲಿ 259, ಕಲಬುರಗಿಯಲ್ಲಿ 234, ಧಾರವಾಡದಲ್ಲಿ 195 ಮತ್ತು ಮೈಸೂರಿನಲ್ಲಿ 190 ಪ್ರಕರಣಗಳು ದಾಖಲಾಗಿವೆ.
ಪರಿಹಾರದ ವಿಷಯದಲ್ಲಿ, ರಾಜ್ಯ ಸರ್ಕಾರವು 2023-24ರಲ್ಲಿ 1,081 ಅರ್ಹ ರೈತ ಕುಟುಂಬಗಳಿಗೆ 54 ಕೋಟಿ ರೂಪಾಯಿ, 2024-25ರಲ್ಲಿ 896 ಕುಟುಂಬಗಳಿಗೆ 44.8 ಕೋಟಿ ರೂಪಾಯಿ ಮತ್ತು 2025-26ರಲ್ಲಿ (ನವೆಂಬರ್ ವರೆಗೆ) 193 ಕುಟುಂಬಗಳಿಗೆ 9.65 ಕೋಟಿ ರೂಪಾಯಿ ಪರಿಹಾರವನ್ನು ವಿತರಿಸಿದೆ. 112 ಪ್ರಕರಣಗಳು ಇನ್ನೂ ಪರಿಶೀಲನೆಯಲ್ಲಿವೆ ಎಂದರು.
ತಾಂತ್ರಿಕ ಸಮಸ್ಯೆಗಳಿಂದಾಗಿ ಪರಿಹಾರ ಪಾವತಿ ವಿಳಂಬವಾಗಿದೆ. ಒಮ್ಮೆ ಪರಿಹಾರವಾದರೆ, ಪಾವತಿಗಳನ್ನು ತ್ವರಿತವಾಗಿ ಮಾಡಲಾಗುವುದು ಎಂದರು. 2023-24ರಲ್ಲಿ ವರದಿಯಾದ 1,254 ಆತ್ಮಹತ್ಯೆಗಳಲ್ಲಿ 164 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. 1,090 ಕುಟುಂಬಗಳನ್ನು ಪರಿಹಾರಕ್ಕೆ ಅರ್ಹರೆಂದು ಪರಿಗಣಿಸಲಾಗಿದೆ.
2024-25ರಲ್ಲಿ 156 ಪ್ರಕರಣಗಳನ್ನು ತಿರಸ್ಕರಿಸಲಾಗಿದ್ದು, 1,022 ಕುಟುಂಬಗಳು ಸರ್ಕಾರದ ಆರ್ಥಿಕ ಬೆಂಬಲಕ್ಕೆ ಅರ್ಹವಾಗಿವೆ. ಪ್ರಸ್ತುತ ಹಣಕಾಸು ವರ್ಷದಲ್ಲಿ (2025-26) 377 ಆತ್ಮಹತ್ಯೆಗಳಲ್ಲಿ 46 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ ಮತ್ತು 310 ಕುಟುಂಬಗಳು ಪರಿಹಾರಕ್ಕೆ ಅರ್ಹವಾಗಿವೆ ಎಂದು ಪರಿಗಣಿಸಲಾಗಿದೆ.
2024-25ರಲ್ಲಿ 156 ಪ್ರಕರಣಗಳನ್ನು ತಿರಸ್ಕರಿಸಲಾಗಿದ್ದು, 1,022 ಕುಟುಂಬಗಳು ಬೆಂಬಲಕ್ಕೆ ಅರ್ಹವಾಗಿವೆ. ಪ್ರಸ್ತುತ ಹಣಕಾಸು ವರ್ಷದಲ್ಲಿ (2025-26), 377 ಆತ್ಮಹತ್ಯೆಗಳಲ್ಲಿ 46 ಪ್ರಕರಣಗಳನ್ನು ತಿರಸ್ಕರಿಸಲಾಗಿದೆ. 310 ಕುಟುಂಬಗಳು ಪರಿಹಾರಕ್ಕೆ ಅರ್ಹವಾಗಿವೆ ಎಂದು ಪರಿಗಣಿಸಲಾಗಿದೆ.
ವಿರೋಧ ಪಕ್ಷ ನಾಯಕ ವಿಜಯೇಂದ್ರ ಖಂಡನೆ
ರೈತರ ಆತ್ಮಹತ್ಯೆಯ ವಿಷಯದಲ್ಲಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ನಿರ್ಲಕ್ಷ್ಯ ತೋರಿಸಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದರು.
ರೈತರ ಸಂಕಷ್ಟವನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಈ ಭ್ರಷ್ಟ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯಕ್ಕೆ ಕ್ಷಮೆಯಿಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ, ಕರ್ನಾಟಕವು ರೈತರ ಆತ್ಮಹತ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವುದು ತೀವ್ರ ದುಃಖಕರ ಸಂಗತಿ ಎಂದು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ 2,809 ರೈತರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಆಘಾತಕಾರಿ ವಿಷಯ ಎಂದಿದ್ದಾರೆ.
Advertisement