

ಬೆಳಗಾವಿ: ಸುಮಾರು 40 ಸಾವಿರ ಕೋಟಿ ರೂಪಾಯಿಗಳನ್ನು ವಿವಿಧ ರೀತಿಯಲ್ಲಿ ಕೆರೆಗಳನ್ನು ತುಂಬಿಸಲು ಖರ್ಚು ಮಾಡಲಾಗುತ್ತಿದೆ. ಅನೇಕ ಕೆರೆಗಳನ್ನು ತುಂಬಿಸಲು ಸುಮಾರು 3 ಸಾವಿರ ಕೋಟಿಯನ್ನು ಇಂಧನ ಇಲಾಖೆಯಿಂದ ಖರ್ಚು ಮಾಡಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ ನಡೆದ ಕೆರೆ ಸಂರಕ್ಷಣೆ ಜಾಗೃತಿ ಮತ್ತು "ನೀರಿದ್ದರೆ ನಾಳೆ" ಕಾರ್ಯಕ್ರಮದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು. ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ವಿದ್ಯುತ್ ಸರಬರಾಜು ಮಾಡಿದ ಕಂಪನಿಗಳಿಗೆ ಸುಮಾರು ಶೇ.15 ರಷ್ಟು ಬಡ್ಡಿ ಸೇರಿಸಿ ಕೊಡಬೇಕಿದೆ. ಇದರ ಬಗ್ಗೆ ವಿಧಾನಸಭೆಯಲ್ಲಿ ಉತ್ತರ ನೀಡಬೇಕಿದೆ. ಸಿ.ಪಿ.ಯೋಗೇಶ್ವರ್ ಅವರು ಸೇರಿದಂತೆ ಒಂದಷ್ಟು ಜನ ಶಾಸಕರು ಇದರ ಬಗ್ಗೆ ಪ್ರಸ್ತಾವನೆ ಮುಂದಿಟ್ಟಿದ್ದಾರೆ" ಎಂದು ತಿಳಿಸಿದರು.
ಪಂಪ್ ಮಾಡಿ ನೀರು ತುಂಬಿಸುವ ಕೆರೆಗಳಿಗೆ ಮೀನು ಮರಿಗಳನ್ನು ಬಿಟ್ಟು ಅದನ್ನು ಹರಾಜು ಹಾಕಿ ಅದರ ಆದಾಯದಿಂದ ವಿದ್ಯುತ್ ಬಿಲ್ ಪಾವತಿ ಮಾಡುವ ಆಲೋಚನೆಯಿದೆ. ಬರುವ ಆದಾಯದಿಂದ ಕೆರೆಗಳ ನಿರ್ವಹಣೆ ಮಾಡಬೇಕಿದೆ. ಸುಮಾರು 20 ಸಾವಿರ ಕೋಟಿ ಹಣವನ್ನು ಬೋರ್ ವೆಲ್ ಗಳಿಗೆ ಉಚಿತ ವಿದ್ಯುತ್ ನೀಡಲು ಸರ್ಕಾರ ಖರ್ಚು ಮಾಡುತ್ತಿದೆ. ಎಷ್ಟು ನಾವು ಸಹಾಯಧನ ನೀಡಲು ಸಾಧ್ಯ. ರೈತರು 10 ಹೆಚ್ ಪಿ ಮೋಟರ್ ಹಾಕಿ ನೀರು ತೆಗೆಯುತ್ತಿದ್ದಾರೆ. 20 ಕಿಮೀ ದೂರಕ್ಕೂ ನೀರು ತೆಗೆದುಕೊಂಡು ಹೋಗುತ್ತಿದ್ದಾರೆಎಂದು ತಿಳಿಸಿದರು.
"ಎಚ್.ಕೆ.ಪಾಟೀಲ್ ಅವರು ನೀರಾವರಿ ಸಚಿವರಾಗಿದ್ದಾಗ ಕೆರೆ ನೀರು ಬಳಕೆದಾರರ ಸಂಘಗಳಿಗೆ ಹೊಸ ರೂಪ ನೀಡಿದರು. ಮಧ್ಯದಲ್ಲಿ ಇದು ನಿಂತು ಹೋಗಿತ್ತು. ಈಗ ನಾನು ಹಾಗೂ ಬೋಸರಾಜು ಅವರು ಸೇರಿ ಹೊಸ ರೂಪ ನೀಡಿದ್ದೇವೆ" ಎಂದರು.
ಕಾವೇರಿ, ಮಹದಾಯಿ, ತುಂಗಭದ್ರಾ, ಕೃಷ್ಣಾ ಹೀಗೆ ಹಲವಾರು ಹೋರಾಟಗಳನ್ನು ನಾವು ಮಾಡುತ್ತಿದ್ದೇವೆ. ಭದ್ರಾ ಮೇಲ್ದಂಡೆ, ಕೃಷ್ಣಾ, ಮಹದಾಯಿ ಯೋಜನೆಯಡಿ ನಾವು ಕೇಂದ್ರ ಸರ್ಕಾರದ ಇಕ್ಕಳದಲ್ಲಿ ಸಿಲುಕಿ ಕೊಂಡಿದ್ದೇವೆ. ಆಲಮಟ್ಟಿ ಎತ್ತರ ಹೆಚ್ಚಳದ ಬಗ್ಗೆ ಅಧಿಸೂಚನೆ ಹೊರಡಿಸಬೇಕು. ಮಹದಾಯಿಗೆ ಅರಣ್ಯ ಇಲಾಖೆ ಒಪ್ಪಿಗೆ ನೀಡಬೇಕು. ಭದ್ರಾ ಮೇಲ್ದಂಡೆಗೆ ಕೇಂದ್ರ ಹಣ ನೀಡಬೇಕಿದೆ. ತುಂಗಭದ್ರಾ ಯೋಜನೆಯಡಿ ನಾವು ನಮ್ಮ ಪಾಲಿನ ನೀರನ್ನು ಸಮತೋಲಿತ ಜಲಾಶಯ ನಿರ್ಮಾಣ ಮಾಡಿ ಅಥವಾ ಪಂಪ್ ಮಾಡಿ ಬಳಸಿಕೊಳ್ಳಬೇಕಿದೆ. ಇದಕ್ಕೆ ಆಂದ್ರ, ತೆಲಂಗಾಣ ಒಪ್ಪಿಗೆ ಸಿಗಬೇಕು. ಅವರುಗಳು ನೀರು ಸಿಗುತ್ತಿದೆ ಎಂದು ಸುಮ್ಮನಿದ್ದಾರೆ" ಎಂದು ವಿವರಿಸಿದರು.
"ನಾನು ಸಹ ನೀರಿನ ವಿವಾದಗಳ ಕುರಿತು ಚರ್ಚೆ ನಡೆಸುವ ನೀರಿನ ಹೆಜ್ಜೆ ಪುಸ್ತಕ ಬರೆದಿದ್ದೇನೆ. ನೀರು ಮತ್ತು ಹಾಲಿನ ಬೆಲೆ ಒಂದೇ ಮಟ್ಟಕ್ಕೆ ಬಂದಿದೆ. ನಮಗೆ ನೀರೆ ಸರ್ವಸ್ವ, ಜೀವ ಎಲ್ಲವು" ಎಂದು ತಿಳಿಸಿದರು.
Advertisement