

ಬಾಗಲಕೋಟೆ: ಬಾಗಲಕೋಟೆಯ ನವನಗರದಲ್ಲಿರುವ ವಿಶೇಷ ಚೇತನ ಮಕ್ಕಳ ವಸತಿ ಶಾಲೆಯಲ್ಲಿ ಬುದ್ಧಿಮಾಂದ್ಯ ಮಕ್ಕಳ ಮೇಲೆ ಶಿಕ್ಷಕ ದಂಪತಿ ಚಿತ್ರಹಿಂಸೆ ನೀಡಿ ಕ್ರೌರ್ಯ ಮೆರೆದಿದ್ದಾರೆ. ಬುದ್ಧಿಮಾಂದ್ಯ ಮಕ್ಕಳ ಮೇಲೆ ಶಿಕ್ಷಕ ದಂಪತಿ ಅಕ್ಷಯ್ ಹಾಗೂ ಪತ್ನಿ ಮಾಲಿನಿ ಎಂಬುವವರು ಮನಬಂದಂತೆ ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಚಿತ್ರಹಿಂಸೆ ನೀಡಿದ್ದಾರೆ.
ಶಿಕ್ಷಕರ ಕ್ರೌರ್ಯದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರ ಮೂಲದವರಾದ ಶಿಕ್ಷಕ ಅಕ್ಷಯ್ ಹಾಗೂ ಪತ್ನಿ ಮಾಲಿನಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದು, ಸಹ ಶಿಕ್ಷಕ ವಿಶಾಲ್ ಎಂಬಾತ ಕೂಡ ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬಾಗಲಕೋಟೆಯ ನವನಗರ ಠಾಣೆಯಲ್ಲಿ ಶಾಲೆ ವಿರುದ್ಧ ದೂರು ದಾಖಲಾಗಿದೆ.
ಬುದ್ಧಿಮಾಂದ್ಯ ಬಾಲಕರ ಮೇಲೆ ಶಿಕ್ಷಕ ದಂಪತಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಸಿದ್ದಾರ್ಥ ಗೋಯಲ್ ಪ್ರತಿಕ್ರಿಯಿಸಿದ್ದಾರೆ. ಈ ಘಟನೆ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಅಕ್ಷಯ್ ಹಾಗೂ ಆತನ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದರು.
Advertisement