

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರಿದಿದೆ. ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಮತ್ತು ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಮುಂದುವರಿಸಿದ್ದಾರೆ.
ದಾಳಿಗೊಳಗಾದ ಅಧಿಕಾರಿಗಳೆಂದರೆ ಬಾಗಲಕೋಟೆಯ ಜಿಲ್ಲಾ ಪಂಚಾಯತ್‌ನ ಸಹಾಯಕ ಕಾರ್ಯದರ್ಶಿ ಶ್ಯಾಮಸುಂದರ್ ಕಾಂಬ್ಳೆ; ವಿಜಯಪುರದ ಬಾಗೇವಾಡಿಯ ಸಹಾಯಕ ಕೃಷಿ ನಿರ್ದೇಶಕ ಮಾಳಪ್ಪ; ಕಾರವಾರದ ಸಿದ್ದಾಪುರ ಕೋಲಾ ಶಿರಸಿ ಸಮೂಹ ಗ್ರಾಮ ಸೇವಾ ಸಹಕಾರಿ ಸಂಘ ನಿಯಮಿತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರುತಿ ಯಶವಂತ್ ಮಾಳವಿ; ಮತ್ತು ರಾಯಚೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಜಯಲಕ್ಷ್ಮಿ.
ಬಾಗಲಕೋಟೆ ಜಿಲ್ಲೆ ಜಿ.ಪಂ. ಯೋಜನಾ ನಿರ್ದೇಶಕರು (DRDA) ಶ್ಯಾಂ ಸುಂದರ್ ಕಾಂಬಳೆ ಅವರ ಬಾಗಲಕೋಟೆ ಮತ್ತು ಗದಗ ಜಿಲ್ಲೆಯ ನರಗುಂದದ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. ಇದೇ ಜಿಲ್ಲೆಯ ಬಾಗೇವಾಡಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಪ್ಪ ಅವರ ಮನೆಯ ಮೇಲೆಯೂ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮುಖ್ಯಾಕಾರ್ಯನಿರ್ವಹಣಾ ಅಧಿಕಾರಿ ಮಾರುತಿ ಯಶವಂತ ಮಾಳವಿ ಅವರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಯಿತು. ರಾಯಚೂರು ಜಿಲ್ಲೆಯಲ್ಲಿ ನಿವೃತ್ತ ಸಹಾಯಕ ಇಂಜಿನಿಯರ್ ವಿಜಯಲಕ್ಷ್ಮೀ ಅವರ ಶ್ರೀ ರೇಣುಕಾ ನಿಲಯದ ಮನೆಯಲ್ಲಿ ಪರಿಶೀಲನೆ ನಡೆದಿದೆ.
ಚಿಕ್ಕಜಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ
ಚಿಕ್ಕಜಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶಿವಣ್ಣ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕೇಸ್ ಒಂದರ ವಿಚಾರವಾಗಿ 50 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ನಿನ್ನೆ ರಾತ್ರಿ ಟ್ರ್ಯಾಪ್ ಮಾಡಿ ಬಂಧಿಸಲಾಗಿದೆ. ಲೋಕಾಯುಕ್ತರು ಹಣ ಪಡೆಯುವಾಗಲೇ ಶಿವಣ್ಣ ಅವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
Advertisement