ಅಸ್ಸಾಂನಲ್ಲಿ ಹಿಂಸಾತ್ಮಕ ಪ್ರತಿಭಟನೆ: ವಿಶೇಷಚೇತನ ವ್ಯಕ್ತಿ ಸೇರಿ ಇಬ್ಬರು ಸಾವು; 45 ಕ್ಕೂ ಹೆಚ್ಚು ಮಂದಿಗೆ ಗಾಯ

ಖೇರೋನಿಯಲ್ಲಿ ಕರ್ಬಿ ಸಮುದಾಯಕ್ಕೆ ಸೇರಿದ ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಂಬ್, ಕಲ್ಲು ತೂರಾಟ ಮತ್ತು ಬಾಣಗಳಿಂದ ದಾಳಿ ನಡೆಸಿದರು. ಕೆಲವು ಹಳ್ಳಿಗಳ ಮೇವು ಮೀಸಲು (VGRs) ಮತ್ತು ವೃತ್ತಿಪರ ಮೇವು ಮೀಸಲು (PGRs) ಗಳಿಂದ ಅನ್ಯರನ್ನು ಹೊರಹಾಕಬೇಕೆಂದು ಅವರು ಒತ್ತಾಯಿಸಿದರು.
Security personnel deployed to maintain law and order after a clash between two groups over the issue of eviction, at Kheroni in West Karbi Anglong district, Assam
ಅಸ್ಸಾಂನ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯ ಖೇರೋನಿಯಲ್ಲಿ ತೆರವು ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದ ನಂತರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
Updated on

ಗುವಾಹಟಿ: ಅಸ್ಸಾಂನ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ನಿನ್ನೆ ಮಂಗಳವಾರ ಸತತ ಎರಡನೇ ದಿನವೂ ಗಲಭೆ ಮುಂದುವರೆದಿದ್ದು, ಹೊರಗಿನ ಅತಿಕ್ರಮಣಕಾರರನ್ನು ಹೊರಹಾಕುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಗಲಭೆ ಮಾಡಿ ಬೆಂಕಿ ಹಚ್ಚಿ ಬುಡಕಟ್ಟು ಜನಾಂಗದವರಲ್ಲದವರ ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸಗೊಳಿಸಿದ್ದಾರೆ.

ಖೇರೋನಿಯಲ್ಲಿ ಕರ್ಬಿ ಸಮುದಾಯಕ್ಕೆ ಸೇರಿದ ಪ್ರತಿಭಟನಾಕಾರರು ಪೊಲೀಸರ ಮೇಲೆ ಬಾಂಬ್, ಕಲ್ಲು ತೂರಾಟ ಮತ್ತು ಬಾಣಗಳಿಂದ ದಾಳಿ ನಡೆಸಿದರು. ಕೆಲವು ಹಳ್ಳಿಗಳ ಮೇವು ಮೀಸಲು (VGRs) ಮತ್ತು ವೃತ್ತಿಪರ ಮೇವು ಮೀಸಲು (PGRs) ಗಳಿಂದ ಅನ್ಯರನ್ನು ಹೊರಹಾಕಬೇಕೆಂದು ಅವರು ಒತ್ತಾಯಿಸಿದರು.

ಬುಡಕಟ್ಟು ಜನಾಂಗಕ್ಕೆ ಸೇರಿದ ಒಬ್ಬ ವಿಶೇಷಚೇತನ ವ್ಯಕ್ತಿ ಪ್ರತಿಭಟನಾಕಾರರಿಂದ ಬೆಂಕಿ ಹಚ್ಚಲ್ಪಟ್ಟ ಕಟ್ಟಡದೊಳಗೆ ಸಿಲುಕಿಕೊಂಡು ಸಜೀವ ದಹನಗೊಂಡಿದ್ದರು. ಹಿಂಸಾಚಾರದಲ್ಲಿ ಗಂಭೀರವಾಗಿ ಗಾಯಗೊಂಡ ಪ್ರತಿಭಟನಾಕಾರರೊಬ್ಬರು ಸಹ ಮೃತಪಟ್ಟಿದ್ದಾರೆ.

ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಶಾಂತಿ ಕಾಪಾಡಲು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂದು ಇಬ್ಬರು ವ್ಯಕ್ತಿಗಳು ಪ್ರಾಣ ಕಳೆದುಕೊಂಡಿರುವುದು ತೀವ್ರ ನೋವಿನ ಸಂಗತಿ ಎಂದು ಅವರು ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.

ಪರಿಸ್ಥಿತಿ ಸಹಜ ಸ್ಥಿತಿಗೆ ಬರಲು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ನಾವು ಸಂಬಂಧಪಟ್ಟ ಎಲ್ಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಹೇಳಿದರು.

ಸೋಮವಾರ ಸಂಜೆಯಿಂದ ಎರಡೂ ಜಿಲ್ಲೆಯಲ್ಲಿ ಬಿಎನ್‌ಎಸ್‌ಎಸ್‌ನ ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ಈ ಘಟನೆಗಳು ಸಂಭವಿಸಿವೆ. ರಾಜ್ಯ ಸರ್ಕಾರವು ಎರಡು ಜಿಲ್ಲೆಗಳಲ್ಲಿ ಇಂಟರ್ನೆಟ್/ಮೊಬೈಲ್ ಡೇಟಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಸೋಮವಾರದಿಂದ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿರುವ ಪೊಲೀಸ್ ಮಹಾನಿರ್ದೇಶಕ ಹರ್ಮೀತ್ ಸಿಂಗ್ 38 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಅವರು ಎರಡು ಕಡೆಯಿಂದ ನಮ್ಮ ಮೇಲೆ ದಾಳಿ ಮಾಡಿದರು. ಐಪಿಎಸ್ ಅಧಿಕಾರಿ ಸೇರಿದಂತೆ ಮೂವತ್ತೆಂಟು ಪೊಲೀಸ್ ಸಿಬ್ಬಂದಿ ಗಾಯಗೊಂಡರು. ನನ್ನ ಭುಜಕ್ಕೆ ಪೆಟ್ಟು ಬಿದ್ದಿದೆ ಎಂದು ಹೇಳಿದರು.

ಪ್ರತಿಭಟನಾಕಾರರು ನಿನ್ನೆ ಹಿಂಸಾಚಾರಕ್ಕೆ ಇಳಿಯುವುದಿಲ್ಲ ಎಂದು ಭರವಸೆ ನೀಡಿದ್ದರು. ಇಂದು ಮತ್ತೆ ಅಂಗಡಿಗಳ ಮೇಲೆ ದಾಳಿ ಮಾಡಿ ಗ್ಯಾಸ್ ಸಿಲಿಂಡರ್‌ಗಳನ್ನು ಸಿಡಿಸಿದರು. ನಮ್ಮ ಮೇಲೆ ಬಾಂಬ್‌ ದಾಳಿ ಮಾಡಲಾಯಿತು. ನಮ್ಮ ಸಿಬ್ಬಂದಿಗಳಲ್ಲಿ ಒಬ್ಬರಿಗೆ ಬಾಣ ತಗುಲಿತು. ನಾವು ಸಂಯಮ ಕಾಯ್ದುಕೊಳ್ಳುತ್ತಿದ್ದೇವೆ. ಆಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಮಾತ್ರ ಹಾರಿಸಿದ್ದೇವೆ ಎಂದು ಹೇಳಿದರು.

ಶಾಂತಿಗಾಗಿ ಕರೆ ನೀಡಿರುವ ಪೊಲೀಸರು ಹಿಂಸಾಚಾರ ಮುಂದುವರಿದರೆ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸೋಮವಾರ ರಾತ್ರಿ ಪೊಲೀಸರು ಮತ್ತು ರಾಜ್ಯ ಶಿಕ್ಷಣ ಸಚಿವ ರನೋಜ್ ಪೆಗು ಅವರು ಆ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಹಿಂಸಾಚಾರ ಕಡಿಮೆಯಾಗಿತ್ತು. ಪೆಗು ಪ್ರತಿಭಟನಾಕಾರರ ಹದಿನೈದು ದಿನಗಳ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವಲ್ಲಿ ಯಶಸ್ವಿಯಾದರು. ಅವರ ಬೇಡಿಕೆಯ ಕುರಿತು ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.

ನಾವು ಪ್ರತಿಭಟನಾಕಾರರು ಅತಿಕ್ರಮಣದಾರರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದರು. ಆದರೂ ಸಚಿವರು ಪ್ರದೇಶದಿಂದ ಹೊರಬಂದ ಸ್ವಲ್ಪ ಸಮಯದ ನಂತರ ಮಂಗಳವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿತು.

ಖೇರೋನಿಯಲ್ಲಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಒಂಬತ್ತು ಜನರನ್ನು ಭಾನುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಹರಡಿದ ನಂತರ, ಪ್ರತಿಭಟನಾಕಾರರು ಸೋಮವಾರ ಕರ್ಬಿ ಆಂಗ್ಲಾಂಗ್ ಸ್ವಾಯತ್ತ ಮಂಡಳಿ (KAAC) ಮುಖ್ಯ ಕಾರ್ಯನಿರ್ವಾಹಕ ಸದಸ್ಯ ತುಲಿರಾಮ್ ರೋಂಗ್‌ಹಾಂಗ್ ಅವರ ಪೂರ್ವಜರ ನಿವಾಸಕ್ಕೆ ಬೆಂಕಿ ಹಚ್ಚಿದ್ದರು.

ನಂತರ, ಅವರ ಆರೋಗ್ಯ ಸ್ಥಿತಿ ಹದಗೆಟ್ಟ ಕಾರಣ ಅವರನ್ನು ಗುವಾಹಟಿಗೆ ಕರೆದೊಯ್ಯಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದರು.

ಸೋಮವಾರ ಬೆಳಗ್ಗೆ, ರಸ್ತೆಯನ್ನು ತಡೆದು ಅಂಗಡಿಗಳನ್ನು ಧ್ವಂಸಗೊಳಿಸಿದ ನಂತರ, ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು 26 ಕಿಮೀ ದೂರದಲ್ಲಿರುವ ರೋಂಗ್‌ಹಾಂಗ್ ಕ್ಷೇತ್ರವಾದ ಡೊಂಕಮೋಕಮ್‌ಗೆ ಪ್ರದರ್ಶನ ನಡೆಸಲು ತೆರಳಿದರು.

ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಸಿಬ್ಬಂದಿ ಬಲಪ್ರಯೋಗ ಮಾಡಿ, ಖಾಲಿ ಗುಂಡು ಹಾರಿಸಿದರು. ಗಲಾಟೆ ಮುಂದುವರಿದಾಗಲೂ, ಕೆಲವು ಪ್ರತಿಭಟನಾಕಾರರು ರೊಂಗ್‌ಹಾಂಗ್‌ನ ಮನೆಗೆ ಬೆಂಕಿ ಹಚ್ಚಿ ಅದು ಸುಟ್ಟುಹೋಯಿತು.

ಪಶ್ಚಿಮ ಕರ್ಬಿ ಆಂಗ್ಲಾಂಗ್ ಮತ್ತು ಕರ್ಬಿ ಆಂಗ್ಲಾಂಗ್ ಸಂವಿಧಾನದ ಆರನೇ ವೇಳಾಪಟ್ಟಿಯ ಅಡಿಯಲ್ಲಿ ಬರುತ್ತದೆ. ಅಲ್ಲಿ ಸ್ಥಳೀಯ ಬುಡಕಟ್ಟು ಸಮುದಾಯಗಳಿಗೆ ಭೂಮಿಯನ್ನು ರಕ್ಷಿಸಲಾಗಿದೆ. ಪಶ್ಚಿಮ ಕರ್ಬಿ ಆಂಗ್ಲಾಂಗ್‌ನ ವಿಜಿಆರ್‌ಗಳು ಮತ್ತು ಪಿಜಿಆರ್‌ಗಳಲ್ಲಿ ವಿಶಾಲವಾದ ಭೂಮಿಯನ್ನು ಹೊರಗಿನವರು ಅತಿಕ್ರಮಿಸಿದ್ದಾರೆ ಎಂದು ಪ್ರತಿಭಟನಾಕಾರರ ಆರೋಪವಾಗಿದೆ.

ಕಳೆದ ವರ್ಷ, ಕೆಎಎಸಿ ಆಡಳಿತವು ಅಕ್ರಮ ವಸಾಹತುಗಾರರಿಗೆ ತೆರವು ನೋಟಿಸ್‌ಗಳನ್ನು ನೀಡಿತ್ತು. ಆದರೆ ಅವರು ನೋಟಿಸ್‌ ಪ್ರಶ್ನಿಸಿ ಗುವಾಹಟಿ ಹೈಕೋರ್ಟ್‌ಗೆ ಹೋದರು. ನಂತರ, ನ್ಯಾಯಾಲಯವು ತೆರವಿಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com