

ಬೆಂಗಳೂರು: ಕೆಎಸ್‌ಆರ್‌ಟಿಸಿ ಸೇರಿದಂತೆ 4 ರಾಜ್ಯ ಸಾರಿಗೆ ನಿಗಮಗಳ ಮಹಿಳಾ ನೌಕರರಿಗೆ ಋತುಚಕ್ರದ ರಜೆ ನೀಡಲು ಸಾರಿಗೆ ಇಲಾಖೆ ಒಪ್ಪಿಗೆ ನೀಡಿದೆ.
ಆದೇಶದಂತೆ ಕೆಎಸ್‌ಆರ್‌ಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರು, ಅಧಿಕಾರಿಗಳಿಗೆ ಜ.1ರಿಂದ ಅನ್ವಯವಾಗುವಂತೆ ಮಾಸಿಕ ಒಂದು ದಿನ ಋತುಚಕ್ರ ರಜೆ ನೀಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಕೆಎಸ್‌ಆರ್‌ಟಿಸಿಯಲ್ಲಿ ಕೆಲಸ ಮಾಡುತ್ತಿರುವ 18ರಿಂದ 52 ವರ್ಷ ವಯೋಮಿತಿಯ ಮಹಿಳಾ ನೌಕರರು, ಅಧಿಕಾರಿಗಳು ಋತುಚಕ್ರ ರಜೆ ಪಡೆಯಲು ಅರ್ಹರಿರುತ್ತಾರೆ. ಈ ರಜೆ ಪಡೆಯಲು ಯಾವುದೇ ರೀತಿಯ ವೈದ್ಯಕೀಯ ಪ್ರಮಾಣ ಪತ್ರ ಒದಗಿಸುವ ಅವಶ್ಯಕತೆಯಿಲ್ಲ ಮತ್ತು ಆಯಾ ತಿಂಗಳಿನಲ್ಲೇ ಈ ರಜೆ ಪಡೆಯಬೇಕು. ರಜೆ ಪಡೆಯುವವರು ತಮ್ಮ ರಜೆ ಅಥವಾ ಹಾಜರಾತಿ ಪುಸ್ತಕ ದಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಋತುಚಕ್ರ ರಜೆ ಸೌಲಭ್ಯ ಜನವರಿ 01 2026ರಿಂದ ಜಾರಿಗೆ ಬರುತ್ತಿದ್ದು, ಪ್ರತಿ ತಿಂಗಳು ಒಂದು ದಿನದಂತೆ ಋತುಚಕ್ರ ರಜೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
Advertisement