

ಚಿಕ್ಕಮಗಳೂರು: ಇಲ್ಲಿನ ಕಡೂರು ತಾಲ್ಲೂಕಿನಲ್ಲಿ ಮೂರು ಕೃಷ್ಣಮೃಗಗಳು ಶಂಕಿತ ಗುಂಡೇಟಿನಿಂದ ಸಾವಿಗೀಡಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಾಸೂರು ಅಮೃತ ಮಹಲ್ ಕಾವಲಿನ ಕೃಷ್ಣಮೃಗ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಖಾಸಗಿ ಕೃಷಿ ಭೂಮಿಯಲ್ಲಿ ಮಂಗಳವಾರ ಮೂರು ಕೃಷ್ಣಮೃಗಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ಎರಡು ಹೆಣ್ಣು ಮತ್ತು ಒಂದು ಗಂಡು ಕೃಷ್ಣಮೃಗವಾಗಿದ್ದು, ಇವು ಒಂದೂವರೆ ವರ್ಷದಿಂದ ಎರಡು ವರ್ಷದೊಳಗಿನ ವಯಸ್ಸಿನವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರಿಂದ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಗುಂಡೇಟಿನ ಪುರಾವೆಗಳು ಮತ್ತು ಸಮೀಪದಲ್ಲಿ ವಾಹನಗಳು ಸಂಚರಿಸಿರುವ ಗುರುತುಗಳು ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳ ಪ್ರಕಾರ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅಪರಾಧಿಗಳನ್ನು ಬಂಧಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ.
ಬೇಟೆಗಾರರ ಗುಂಡೇಟಿಗೆ ಕೃಷ್ಣಮೃಗಗಳು ಬಲಿಯಾಗಿರಬಹುದು ಎಂದು ಕೆಲವು ಸ್ಥಳೀಯರು ಮತ್ತು ಪರಿಸರವಾದಿಗಳಿಂದ ಅನುಮಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ಪರೀಕ್ಷೆಗಾಗಿ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಅವರು ಹೇಳಿದರು.
Advertisement