

ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MNREGA)ಯ ಹೆಸರನ್ನು ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’ (VB-G RAM G) ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ಯೋಜನೆಗೆ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್. ಮುನಿಯಪ್ಪ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದ ಕಬ್ಬನ್ ಪಾರ್ಕ್‌ನಲ್ಲಿ ಬುಧವಾರ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಹಾಗೂ ಕಾನೂನು ತೂಕಮಾಪನ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಪ್ರಗತಿಪರವಾಗಿದ್ದವು. ಇಂತಹ ಮಹಾನ್ ನಾಯಕರ ಹೆಸರನ್ನು ಅಳಿಸುವ ಪ್ರಯತ್ನ ಸರಿಯಲ್ಲ. ಗ್ರಾಹಕರಿಗೆ ಸೇವೆ ಸಲ್ಲಿಸುವುದು ನಾವು ಮಾಡುತ್ತಿರುವ ಉಪಕಾರವಲ್ಲ, ಅವರು ನಮಗೆ ಸೇವೆ ಮಾಡಲು ಅವಕಾಶ ನೀಡುತ್ತಿರುವುದೇ ಉಪಕಾರ ಎಂದು ಹೇಳಿದರು,
ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಅವರು, ಎಷ್ಟು ಬಿಜೆಪಿ ನಾಯಕರು ರಾಮನ ವಿಗ್ರಹದ ಮುಂದೆ ನಮಸ್ಕರಿಸುತ್ತಾರೆ? ನಾನು ಬೆಳಿಗ್ಗೆ ಬೇಗನೆ ಎದ್ದು ರಾಮನ ಮುಂದೆ ನಮಸ್ಕರಿಸುತ್ತೇನೆ. ದೇವರನ್ನು ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಪೂಜಿಸಬೇಕು ಎಂದು ತಿರುಗೇಟು ನೀಡಿದರು.
ಬಳಿಕ ಕಳೆದ 11 ವರ್ಷಗಳಲ್ಲಿ, ಕಾಂಗ್ರೆಸ್ ಪ್ರಾರಂಭಿಸಿದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಮರುನಾಮಕರಣ ಮಾಡುತ್ತಿದ್ದಾರೆ. ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಒಬ್ಬ ಉತ್ತಮ ನಾಯಕರಾಗಿದ್ದರು, ಅವರು ಪಕ್ಷಾತೀತವಾಗಿ ಎಲ್ಲರೂ ಮೆಚ್ಚುವ ವ್ಯಕ್ತಿಯಾಗಿದ್ದರು. ಕೇಂದ್ರ ಸರ್ಕಾರ ಹಳೆಯ ಕಾರ್ಯಕ್ರಮಗಳಿಗೆ ಮರು ನಾಮಕರಣ ಮಾಡುವ ಬದಲು, ವಾಜಪೇಯಿ ಹೆಸರಿನಲ್ಲಿ ಹೊಸ ಕಾರ್ಯಕ್ರಮವನ್ನೇಕೆ ಪ್ರಾರಂಭಿಸಬಾರದು? ಅದನ್ನ ನಾವು ಸಂತೋಷದಿಂದ ಸ್ವಾಗತಿಸುತ್ತೇವೆಂದು ಹೇಳಿದರು.
Advertisement