

ಚಿತ್ರದುರ್ಗ: ಚಿತ್ರದುರ್ಗದ ಹಿರಿಯೂರು ಬಳಿ ಗುರುವಾರ ಸಂಭವಿಸಿದ ಬಸ್ ಬಸ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದ್ದು, ಈ ನಡುವೆ ಮೃತದೇಹಗಳ ಅಸ್ಥಿಪಂಜರಗಳ ಸ್ಯಾಂಪಲ್ ಪಡೆದಿರುವ ವೈದ್ಯರು ಡಿಎನ್ಎ ಪರೀಕ್ಷೆಗೆ ರವಾನಿಸಿದ್ದಾರೆಂದು ತಿಳಿದುಬಂದಿದೆ.
ಮೃತದೇಹಗಳ ಡಿಎನ್ಎ ಪರೀಕ್ಷೆಗಾಗಿ ಮೃತರ ಸಂಬಂಧಿಕರ ರಕ್ತದ ಮಾದರಿಗಳನ್ನು ವೈದ್ಯರು ಸಂಗ್ರಹಿಸಿದ್ದು, ಇದೀಗ ಬೋನ್ ಸ್ಯಾಂಪಲ್ ಸಂಗ್ರಹಿಸಿ, ಪರೀಕ್ಷೆಗೆ ಹುಬ್ಬಳ್ಳಿ ಲ್ಯಾಬ್'ಗೆ ರವಾನಿಸಿದ್ದಾರೆ.
ಒಂದೆರಡು ದಿನದಲ್ಲಿ ಡಿಎನ್‌ಎ ವರದಿ ಪಡೆಯಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ತ್ವರಿತವಾಗಿ ವರದಿ ನೀಡುವಂತೆ ಮನವಿ ಮಾಡುವ ಭರವಸೆ ನೀಡಿದ್ದಾರೆ.
ಡಿಎನ್‌ಎ ವರದಿ ಬಂದ ಬಳಿಕ ಖಚಿತವಾಗಿ ಮೃತರ ಗುರುತು ಪತ್ತೆಯಾಗಲಿದೆ. ಆ ನಂತರ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆ ಸರ್ಜನ್ ಡಾ.ರವೀಂದ್ರ ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಿನ್ನೆ ದುರ್ಘಟನೆ ಸಂಭವಿಸಿತ್ತು. ಲಾರಿಯೊಂದು ಬಸ್ಸಿಗೆ ಡಿಕ್ಕಿಯಾದ ಪರಿಣಾಮ ಬಸ್ಸಿನಲ್ಲಿ ಬೆಂಕಿ ಹೊತ್ತಿಕೊಂಡು ಉರಿದಿತ್ತು. ಘಟನೆ ವೇಳೆ ಬಸ್ ನಲ್ಲಿ ಒಟ್ಟು 33 ಪ್ರಯಾಣಿಕರಿದ್ದರು ಎನ್ನಲಾಗಿದ್ದು, 6 ಮಂದಿ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಸ್ ಚಾಲಕ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇದರೊಂದಿಗೆ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
Advertisement