

ಬೆಂಗಳೂರು: ಕ್ರಿಸ್ಮಸ್ ಮತ್ತು ವರ್ಷಾಂತ್ಯ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ನೈರುತ್ಯ ರೈಲ್ವೆಯು ಬೆಂಗಳೂರು-ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ಕಲ್ಪಿಸಿರುವ ವಿಶೇಷ ರೈಲು ಸೇವೆಯನ್ನು ಖಾಯಂಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ಎಂ.ಬಿ.ಪಾಟೀಲ್ ಅವರು, ಕ್ರಿಸ್ಮಸ್ ಮತ್ತು ವರ್ಷಾಂತ್ಯದ ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ತಗ್ಗಿಸಲು ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಗದಗ ಬೈಪಾಸ್ ಮೂಲಕ ವಿಜಯಪುರಕ್ಕೆ ವಿಶೇಷ ರೈಲನ್ನು ಓಡಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು–ವಿಜಯಪುರ ರೈಲುಗಳನ್ನು ಹುಬ್ಬಳ್ಳಿ–ಗದಗ ಬೈಪಾಸ್ ಮೂಲಕ ಓಡಿಸಲು ನಡೆದ ನಮ್ಮ ಪ್ರಯತ್ನಕ್ಕೆ ಮೊದಲ ಯಶಸ್ಸು ದೊರೆತಿದೆ. ಈ ಹೊಸ ಮಾರ್ಗದ ಮೂಲಕ ಒಂದು ವಿಶೇಷ ರೈಲು ಯಶಸ್ವಿಯಾಗಿ ಓಡಿದೆ, ಇದರಿಂದ ಎಂಜಿನ್ ಬದಲಾವಣೆ ತಪ್ಪಿದ್ದು ಸಮಯ ಉಳಿತಾಯವಾಗಿದೆ.
ಬಾಗಲಕೋಟೆ–ವಿಜಯಪುರದ ಎಲ್ಲ ರೈಲುಗಳನ್ನು ಈ ಬೈಪಾಸ್ ಮೂಲಕ ಓಡಿಸಿದರೆ, ಪ್ರಯಾಣದ ಸಮಯವನ್ನು 14 ರಿಂದ 10 ಗಂಟೆಗಳಿಗೆ ಇಳಿಸಬಹುದು. ಜೊತೆಗೆ ಪ್ರಯಾಣ ದರವೂ ಕಡಿಮೆಯಾಗಲಿದೆ. ಇದನ್ನು ಸಾಧಿಸಲು ಮೈಸೂರು–ಪಂಡರಪುರ ಎಕ್ಸ್ಪ್ರೆಸ್ ಅನ್ನು ಶಾಶ್ವತವಾಗಿ ಈ ಬೈಪಾಸ್ ಮೂಲಕ ಓಡಿಸಬೇಕು. ಇದಲ್ಲದೆ, ವಿಜಯಪುರಕ್ಕೆ ಒಂದು ಪ್ರತ್ಯೇಕ ವಿಶೇಷ ರೈಲನ್ನು ಕಾಯಂ ಆಗಿ ಓಡಿಸಬೇಕು. ಕೇಂದ್ರ ರೈಲ್ವೆ ಸಚಿವರಿಗೆ ಈ ಬೇಡಿಕೆಯನ್ನು ಮುಂದಿರಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement