
ಬೆಂಗಳೂರು ಉತ್ತರದ ಕೋಗಿಲು ಲೇಔಟ್ ಬಳಿ ನಡೆದ ಮನೆಗಳ ತೆರವು ಕಾರ್ಯಾಚರಣೆಯನ್ನು ಬುಲ್ಡೋಜರ್ ನೀತಿಗೆ ಹೋಲಿಸಿ ಕೇರಳ ಸಿಎಂ ಪಿಣರಾಯಿ ವಿಜಯನ್ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶುಕ್ರವಾರ ಕಿಡಿಕಾರಿದ್ದರು. ಕರ್ನಾಟಕ ಸರ್ಕಾರಕ್ಕೂ ಉತ್ತರ ಪ್ರದೇಶ ಸರ್ಕಾರದ ಗಾಳಿ ಬೀಸಿದೆ. ಯೋಗಿ ನಾಡಿನ ಬುಲ್ಡೋಜರ್ ನೀತಿಯನ್ನು ಇಲ್ಲೂ ತರುವ ಕೆಲಸ ನಡೆಯುತ್ತಿದೆ ಎಂದು ಕಿಡಿಕಾರಿದ್ದರು. ಬೆಂಗಳೂರಿನ ಯಲಹಂಕದ ಕೋಗಿಲು ಗ್ರಾಮದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳನ್ನು ನೆಲಸಮ ಮಾಡಿರುವುದು ತುಂಬಾ ದುಃಖಕರ ವಿಚಾರ, ಏಕಾಏಕಿ ಕಾರ್ಯಾಚರಣೆ ನಡೆಸುವ ಮೂಲಕ ಅಲ್ಲಿನ ಮುಸ್ಲಿಂ ಕುಟುಂಬಗಳನ್ನು ಬೀದಿಗೆ ತಳ್ಳಿದ್ದಾರೆ ಎಂದು ಕೇರಳ ಸಿಎಂ ಆಕ್ರೋಶ ಹೊರಹಾಕಿದ್ದರು. ಮತ್ತೊಂದೆಡೆ ಕೇರಳ ರಾಜ್ಯಸಭಾ ಸದಸ್ಯ ಎ ಎ ರಹೀಮ್ ನೇತೃತ್ವದ ನಿಯೋಗವು ಶನಿವಾರ ಕೋಗಿಲು ಬಡಾವಣೆಗೆ ಭೇಟಿ ನೀಡಿ ನಿವಾಸಿಗಳ ಜೊತೆ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಎಎ ರಹೀಮ್, ಇದು ಕರ್ನಾಟಕ ಸರ್ಕಾರದ 'ಅಲ್ಪಸಂಖ್ಯಾತ ವಿರೋಧಿ' ನಿಲುವು ಎಂದು ಟೀಕಿಸಿದರು.
ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿನ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಕುರಿತಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ಸತ್ಯಾಸತ್ಯತೆ ಅರಿಯದೇ ಕೇರಳ ಸಿಎಂ ಪಿಣರಾಯಿ ವಿಜಯನ್ ಕರ್ನಾಟಕದ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು. ಬೆಂಗಳೂರಿನ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಲ್ಯಾಂಡ್ ಮಾಫಿಯಾದವರು ಸ್ಲಂಗಳನ್ನು ನಿರ್ಮಿಸಲು ನಾವು ಬಿಡುವುದಿಲ್ಲ. ನಾವು ನಮ್ಮ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳುತ್ತೇವೆ. ಅವರಲ್ಲಿ ಯಾರೆಲ್ಲಾ ಅರ್ಹರಿದ್ದಾರೆ. ಅವರಿಗೆ ರಾಜೀವ್ ಗಾಂಧಿ ಯೋಜನೆಯಲ್ಲಿ ಮನೆಗಳನ್ನು ನೀಡಲು ಬದ್ಧವಾಗಿದ್ದೇವೆ ಎಂದರು. ಈ ಮಧ್ಯೆ ದೆಹಲಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇರಳ ಸಿಎಂ ಒಬ್ಬ ಕಮ್ಯೂನಿಸ್ಟ್. 2021-22ರಿಂದ ಅನಧಿಕೃತವಾಗಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರು. ಹೀಗಾಗಿ ತೆರವು ಕಾರ್ಯಾಚರಣೆ ನಡೆಸಬೇಕಾಯಿತು. ಅವರೆಲ್ಲಾ ಅಕ್ರಮ ವಲಸಿಗರಾದರೂ ಮಾನವೀಯತೆಯ ದೃಷ್ಟಿಯಿಂದ ಅವರಿಗೆ ಬೇರೆಡೆ ಮನೆ ಕಟ್ಟಿಕೊಳ್ಳಲು ಜಾಗ ಕೊಡುತ್ತೇವೆ ಎಂದು ಹೇಳಿದರು.
ನವವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣ ಇದೀಗ ಅತಿ ದೊಡ್ಡ ತಿರುವು ಪಡೆದುಕೊಂಡಿದೆ. ಹೆಂಡತಿ ಮೃತಪಟ್ಟ ಬಳಿಕ ಇದೀಗ ಆರೋಪಗಳಿಗೆ ಅಂಜಿ ಪತಿ ಸೂರಜ್ ಕೂಡ ಮಹಾರಾಷ್ಟ್ರದ ನಾಗಪುರದಲ್ಲಿ ನೇಣಿಗೆ ಶರಣಾಗಿದ್ದಾರೆ. ಸೂರಜ್ ಜೊತೆ ಆತನ ತಾಯಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು ಅವರ ಪರಿಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾನವಿ ಸಾವಿನ ನಂತರ ಕುಟುಂಬಸ್ಥರು ಸೂರಜ್ ಕುಟುಂಬದವರ ವಿರುದ್ಧ ಆರೋಪ ಮಾಡಿದ್ದರು. ಇದರಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಪತಿ ಸೂರಜ್, ತಮ್ಮ ತಾಯಿ ಜಯಂತಿ ಮತ್ತು ಸಹೋದರ ಸಂಜಯ್ ಜೊತೆ ಮಹಾರಾಷ್ಟ್ರದ ನಾಗಪುರಕ್ಕೆ ತೆರಳಿದ್ದರು. ಶ್ರೀಲಂಕಾಗೆ ಹನಿಮೂನ್‌ಗೆ ತೆರಳಿದ್ದಾಗ ಗಾನವಿಗೆ ವಿವಾಹಕ್ಕೂ ಮುನ್ನ ಬೇರೊಬ್ಬನ ಜೊತೆ ಸಂಬಂಧ ಇದ್ದ ವಿಚಾರ ಸೂರಜ್ ಗೆ ಗೊತ್ತಾಗಿ ದಂಪತಿ ಮಧ್ಯೆ ಜಗಳ ನಡೆದು ಹನಿಮೂನ್‌ನಿಂದ ಅರ್ಧಕ್ಕೆ ವಾಪಸ್ಸಾಗಿದ್ದರು. ಬಳಿಕ ಸೂರಜ್ ಕುಟುಂಬ ಮಾಡಿದ ಅವಮಾನದಿಂದ ನೊಂದು ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದಳು.
ಕ್ರಿಸ್‌ಮಸ್ ಹಬ್ಬದ ದಿನದಂದು ಮೈಸೂರು ಅರಮನೆಯ ಮುಂಭಾಗ ಸಂಭವಿಸಿದ ಹೀಲಿಯಂ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಇಬ್ಬರು ಮಹಿಳೆಯರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಇದರೊಂದಿಗೆ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ನಂಜನಗೂಡಿನ ಚಾಮಲಾಪುರದ ಮಂಜುಳಾ ಹಾಗೂ ಬೆಂಗಳೂರು ಮೂಲದ ಲಕ್ಷ್ಮಿ ಮೃತ ದುರ್ದೈವಿಗಳು. ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಬಲೂನ್ಗೆ ಹೀಲಿಯಂ ತುಂಬುತ್ತಿದ್ದ ವೇಳೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಸಲೀಂ ಎಂಬಾತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದನು. ಗಂಭೀರವಾಗಿ ಗಾಯಗೊಂಡಿದ್ದ ಮಂಜುಳಾ ಹಾಗೂ ಲಕ್ಷ್ಮಿ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆ ನೀಡಲಾಗುತ್ತಿತ್ತು.
ಚಾಮರಾಜನಗರದ ಗುಂಡ್ಲುಪೇಟೆಯ ಬಂಡೀಪುರದಲ್ಲಿ ಹುಲಿ ದಾಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲಿಯಾಗಿದ್ದಾರೆ. ಕಳೆದ ಎಂಟು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದ ಸಣ್ಣ ಹೈದ ಹುಲಿ ದಾಳಿಗೆ ಮೃತಪಟ್ಟಿದ್ದಾರೆ. ಬಂಡೀಪುರ ಮರಳಳ್ಳ ಕ್ಯಾಂಪ್ ಬಳಿ ಗಸ್ತು ತಿರುಗುತ್ತಿದ್ದ ವೇಳೆ ಸಣ್ಣ ಹೈದ ಮೇಲೆ ಹುಲಿ ದಾಳಿ ನಡೆಸಿದ್ದು ಸ್ಥಳದಲ್ಲೇ ವಾಚರ್ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement