ಕೇರಳ CM ಹುದ್ದೆ ಮೇಲೆ ಕಣ್ಣು: ಕೋಗಿಲು ಪ್ರಕರಣದಲ್ಲಿ ಡ್ಯಾಮೇಜ್ ಕಂಟ್ರೋಲ್ ಗೆ ವೇಣುಗೋಪಾಲ್ ಮುಂದು; ಎಚ್ಚರಿಕೆ ಹೆಜ್ಜೆ ಇಡಲು 'ಹೈ' ಸೂಚನೆ !

2026 ರ ಏಪ್ರಿಲ್/ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಎಲ್‌ಡಿಎಫ್ ಅಧಿಕಾರಕ್ಕೆ ಬಂದರೆ, ಕೇರಳ ಮುಖ್ಯಮಂತ್ರಿ ಹುದ್ದೆಯ ಮೇಲೆ ವೇಣುಗೋಪಾಲ್ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
Siddaramaiah, venu gopal and dk shivakumar
ಸಿದ್ದರಾಮಯ್ಯ, ವೇಣುಗೋಪಾಲ್ ಮತ್ತು ಡಿಕೆ ಶಿವಕುಮಾರ್
Updated on

ಬೆಂಗಳೂರು: ನಗರದ ಕೋಗಿಲು ಪ್ರದೇಶದಲ್ಲಿ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ 250 ಕುಟುಂಬಗಳನ್ನು, ಅದರಲ್ಲೂ ಹೆಚ್ಚಾಗಿ ಮುಸ್ಲಿಂ ಕುಟುಂಬಗಳನ್ನು, ತೆರವುಗೊಳಿಸಿದ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ.

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭವಿಷ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಕೈ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡುವಂತೆ ಸರ್ಕಾರಕ್ಕೆ ಸೂಚಿಸಿದ್ದಾರೆ. ಉತ್ತರ ಪ್ರದೇಶದ "ಬುಲ್ಡೋಜರ್ ರಾಜ್" ಕರ್ನಾಟಕಕ್ಕೆ ಬಂದಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆ ನೀಡಿದ ಕೆಲವು ದಿನಗಳ ನಂತರ, ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಮಧ್ಯಪ್ರವೇಶಿಸಿ, ತೆರವುಗೊಳಿಸಿದವರಿಗೆ ಪುನರ್ವಸತಿ ಕಲ್ಪಿಸುವ ಮೂಲಕ ಈ ಸಮಸ್ಯೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ.

2026 ರ ಏಪ್ರಿಲ್/ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಎಲ್‌ಡಿಎಫ್ ಅಧಿಕಾರಕ್ಕೆ ಬಂದರೆ, ಕೇರಳ ಮುಖ್ಯಮಂತ್ರಿ ಹುದ್ದೆಯ ಮೇಲೆ ವೇಣುಗೋಪಾಲ್ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಬುಧವಾರ ವರ್ಕಲಾದ ಶಿವಗಿರಿ ಮಠದಲ್ಲಿ ನಡೆಯಲಿರುವ 93 ನೇ ಶಿವಗಿರಿ ಯಾತ್ರಾ ಸಭೆಯಲ್ಲಿ ಭಾಗವಹಿಸಲು ಸಿದ್ದರಾಮಯ್ಯ ಮಂಗಳವಾರ ಸಂಜೆ ತಡರಾತ್ರಿ ತಿರುವನಂತಪುರಕ್ಕೆ ಬಂದಿಳಿಯುತ್ತಿದ್ದು, ಅಲ್ಲಿ ಅವರು ವೇಣುಗೋಪಾಲ್ ಅವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

ಧ್ವಂಸ ಕಾರ್ಯವನ್ನು ಸಮರ್ಥಿಸುತ್ತಿದ್ದ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ವೇಣುಗೋಪಾಲ್ ಅವರ ಹಸ್ತಕ್ಷೇಪದ ನಂತರ ತಮ್ಮ ಸ್ವರವನ್ನು ತಗ್ಗಿಸಿದ್ದಾರೆ. ವೇಣುಗೋಪಾಲ್ ಅವರಿಗೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವ ಅಧಿಕಾರವಿದೆ ಎಂದು ಶಿವಕುಮಾರ್ ಹೇಳಿದ್ದಾರೆ, ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾಂಡ್ ಇನ್ನೂ ನಿರ್ಧರಿಸದ ಕಾರಣ ಅವರ ನಡೆಗಳು ಮಹತ್ವದ್ದಾಗಿವೆ.

ಸಿದ್ದರಾಮಯ್ಯ ಪಾಳಯದಿಂದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮತ್ತು ಸಮಾಜ ಕಲ್ಯಾಣ ಸಚಿವ ಡಾ. ಎಚ್‌ಸಿ ಮಹದೇವಪ್ಪ ಅವರು ರಾಜ್ಯದ ವಿಷಯದಲ್ಲಿ ಹಸ್ತಕ್ಷೇಪ ಮಾಡಿದ್ದಕ್ಕಾಗಿ ವಿಜಯನ್ ಅವರನ್ನು ಟೀಕಿಸಿದರು. ಮುಸ್ಲಿಂ ಪ್ರಭಾವಿ ವ್ಯಕ್ತಿ ಜಮೀರ್, ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿಕೊಡುವಂತೆ ಪಿಣರಾಯಿ ವಿಜಯನ್ ಅವರಿಗೆ ಸಲಹೆ ನೀಡಿದರು.

ಇದಕ್ಕೂ ಮೊದಲು, ಸಿಪಿಐಎಂ ನಾಯಕರಾದ ಕೇರಳ ಸಂಸದ ಎಎ ರಹೀಮ್ ಮತ್ತು ಮಾಜಿ ಸಚಿವ ಕೆಟಿ ಜಲೀಲ್ ಸೇರಿದಂತೆ ನಿಯೋಗವು ಕೋಗಿಲುಗೆ ಭೇಟಿ ನೀಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿತು. ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಯುಪಿಯ "ಬುಲ್ಡೋಜರ್ ರಾಜ್" ಗೆ ಹೋಲಿಸಿತು. ಕೇರಳ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ವಿರುದ್ಧ ಸಂತ್ರಸ್ತರ ಅಳಲನ್ನು ಟ್ರಂಪ್ ಕಾರ್ಡ್ ಆಗಿ ಬಳಸಿಕೊಳ್ಳು ಸಿಪಿಎಂ ಯೋಜಿಸಿದೆ.

ಈ ಮಧ್ಯೆ, ಕೇರಳ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮುಸ್ಲಿಮರನ್ನು ಸಮಾಧಾನಪಡಿಸಲು ಮತ್ತು ವಯನಾಡ್ ಸಂಸದ ವೇಣುಗೋಪಾಲ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಕೇಂದ್ರ ನಾಯಕರನ್ನು ಮೆಚ್ಚಿಸಲು ಸರ್ಕಾರ ನೀತಿ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದು ರಾಜ್ಯ ಬಿಜೆಪಿ ಟೀಕಿಸಿದೆ.

ಕರ್ನಾಟಕದ ಕಾಂಗ್ರೆಸ್ ನಾಯಕರು ವೇಣುಗೋಪಾಲ್ ಮತ್ತು ಕಾಂಗ್ರೆಸ್ ಅವರನ್ನು ಗುರಿಯಾಗಿಸಿಕೊಂಡು ವಿಜಯನ್ ಅವರಿಗೆ ಧ್ವಂಸ ವಿಷಯವನ್ನು ನೀಡಲು ಬಯಸುವುದಿಲ್ಲ ಎಂದು ಮೂಲಗಳು ತಿಳಿಸಿವೆ. "ಬೆಂಗಳೂರಿನ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್ ಅನ್ನುಧ್ವಂಸ ಮಾಡಿ, ಅಲ್ಲಿ ವರ್ಷಗಳಿಂದ ವಾಸಿಸುತ್ತಿದ್ದ ಮುಸ್ಲಿಂ ಕುಟುಂಬಗಳನ್ನು ಬೇರುಸಹಿತ ಕಿತ್ತುಹಾಕುವುದು, "ಬುಲ್ಡೋಜರ್ ರಾಜ್" ನ ಕ್ರೂರತೆಯನ್ನು ಬಹಿರಂಗಪಡಿಸುತ್ತದೆ" ಎಂದು ಕೇರಳ ಸಿಎಂ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಡ್ಯಾಮೇಜ್ ಕಂಟ್ರೋಲ್ ಮಾಡಲು ಬಂದ ವೇಣುಗೋಪಾಲ್ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರೊಂದಿಗೆ ಮಾತನಾಡಿದರು. ಈ ನಿರ್ಧಾರದಿಂದ ಉಂಟಾಗುವ ಕ್ರಮಗಳನ್ನು ಗಮನದಲ್ಲಿರಿಸಿಕೊಂಡು ಹೆಚ್ಚಿನ ಎಚ್ಚರಿಕೆ, ಸೂಕ್ಷ್ಮತೆ ಮತ್ತು ಸಹಾನುಭೂತಿಯಿಂದ ಕೈಗೊಳ್ಳಬೇಕಾಗಿತ್ತು ಎಂಬ AICC ಯ ಗಂಭೀರ ಕಳವಳ ವ್ಯಕ್ತ ಪಡಿಸಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಯನಾಡಿನಿಂದ ಆಯ್ಕೆಯಾದರು ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಂತರ ಅಲ್ಲಿ ಸಂಸದರಾಗಿ ನೇಮಕಗೊಂಡರು, ಹೀಗಾಗಿಸೋನಿಯಾ ಗಾಂಧಿ ಕುಟುಂಬಕ್ಕೆ ರಾಜಕೀಯ ಬೆಂಬಲ ನೀಡಿರುವುದರಿಂದ ಕೇರಳವು ಕಾಂಗ್ರೆಸ್‌ಗೆ ಪ್ರಮುಖ ರಾಜ್ಯವಾಗಿದೆ. 2024 ರಲ್ಲಿ, ಕರ್ನಾಟಕ ಸರ್ಕಾರವು ಆನೆಯಿಂದ ಕೊಲ್ಲಲ್ಪಟ್ಟ ವಯನಾಡಿನ ವ್ಯಕ್ತಿಯ ಸಂಬಂಧಿಕರಿಗೆ 15 ಲಕ್ಷ ಪರಿಹಾರವನ್ನು ವಿತರಿಸಿತು. ಸಿದ್ದರಾಮಯ್ಯ ಸರ್ಕಾರ ವಯನಾಡಿನಲ್ಲಿ ಪ್ರವಾಹ ಪೀಡಿತರಿಗೆ 100 ಮನೆಗಳನ್ನು ನಿರ್ಮಿಸಲು 10 ಕೋಟಿ ರೂ.ಗಳನ್ನು ಮಂಜೂರು ಮಾಡಿತ್ತು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಗಳಿಸಿದ ನಂತರ, ವಿಧಾನಸಭಾ ಚುನಾವಣೆಗೆ ಮುನ್ನ ಕೇರಳದಲ್ಲಿ ಸಿಪಿಐಎಂ ದುರ್ಬಲ ಸ್ಥಾನದಲ್ಲಿದೆ. ಕಾಂಗ್ರೆಸ್ ಅನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಲು ಅದು ಬಿಜೆಪಿ ಸ್ಕ್ರಿಪ್ಟ್ ಅನ್ನು ನಕಲು ಮಾಡುತ್ತಿದೆ. ಪಿಣರಾಯಿ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರ ಎಲ್ಲಾ ಸಿಗ್ನೇಚರ್ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿರುವುದರಿಂದ ಸಿಪಿಎಂ ಮತ್ತು ಬಿಜೆಪಿ ಈಗ 'ಭಾಯಿ-ಭಾಯಿ' ಆಗಿವೆ ಎಂದು ಎಐಸಿಸಿ ಕಾರ್ಯದರ್ಶಿ, ಕೇರಳ ಉಸ್ತುವಾರಿ ಪಿವಿ ಮೋಹನ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com