

ಬೆಂಗಳೂರು: ಯಲಹಂಕದ ಕೋಗಿಲು ಬಡಾವಣೆಯಲ್ಲಿ ಮನೆಗಳ ಧ್ವಂಸ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಕಳೆದಗ 25 ವರ್ಷಗಳಿಂದ ವಾಸವಿದ್ದೇವೆಂಬ ಸ್ಥಳೀಯರ ಆರೋಪಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸ್ಯಾಟಲೈಟ್ ಫೋಟೋ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದೆ.
ಈ ಸ್ಯಾಟಲೈಟ್ ಫೋಟೋಗಳು 2016ರ ಮೊದಲು ಆ ಪ್ರದೇಶದಲ್ಲಿ ಯಾವುದೇ ಮನೆಗಳೂ ಇರಲಿಲ್ಲವೆಂಬುದನ್ನು ಸ್ಪಷ್ಟಪಡಿಸಿವೆ.
ಏತನ್ಮಧ್ಯೆ ವಾಸಿಮ್ ಎಂಬ ವ್ಯಕ್ತಿ 1.5 ಲಕ್ಷದಿಂದ 2 ಲಕ್ಷ ರೂ. ನೀಡಿ ಮನೆ ನಿರ್ಮಿಸಿಕೊಂಡಿರುವುದಾಗಿ ಹೇಳಿದ್ದು, ಈ ವಿಚಾರ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದಾಗ ಉಲ್ಭಣಗೊಂಡಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಕೆ.ಶಿವಕುಮಾರ್ ಅವರು, ಈ ಕುರಿತು ತನಿಖೆ ನಡೆಸುವುದಾಗಿ ನಿವಾಸಿಗಳಿಗೆ ಭರವಸೆ ನೀಡಿದರು. ಈ ನಡುವೆ ಅಕ್ರಮ ಮನೆಗಳ ತೆರವು ವೇಳೆ ಜಿಬಿಎ ನೋಟಿಸ್ ನೀಡಿತ್ತು ಎಂದು ಶಿವಕುಮಾರ್ ಅವರು ಹೇಳಿದ್ದು, ನಮಗ ಯಾವುದೇ ನೋಟಿಸ್ ಬಂದಿಲ್ಲ ಎಂದು ವಾಸಿಮ್ ಅವರು ಹೇಳಿದ್ದಾರೆ.
ಯಾವುದೇ ವಿಳಾಸವಿಲ್ಲದ ಕಾರಣ ನಮಗೆ ಯಾವುದೇ ನೋಟಿಸ್ ಗಳನ್ನೂ ನೀಡಿಲ್ಲ. ಸ್ಥಳೀಯರು ಮನೆ ನಿರ್ಮಿಸಿಕೊಳ್ಳಲು ನಮಗೆ ಸಹಾಯ ಮಾಡಿದ್ದರು. ಮನೆ ನಿರ್ಮಿಸಲು ಕಾರ್ಮಿಕರಿಗೆ ಹಣ ನೀಡಲಾಗಿದೆ. ನಾನು ಯಾರಿಗೂ ಮೋಸ ಮಾಡಿಲ್ಲ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಫಕೀರ್ ಸಮುದಾಯವನ್ನು ಪ್ರತಿನಿಧಿಸುವ ಸೈಯದ್ ಖಾದರ್ ಬಾಷಾ ಅವರು ಮಾತನಾಡಿ, ಸ್ಥಳದಲ್ಲಿ 70 ಮನೆಗಳಿದ್ದು, ಹೆಚ್ಚಿನವು 'ಮನೆಗಳು ನಮ್ಮ ಸಮುದಾಯದವರಿಗೆ ಸೇರಿದ್ದಾಗಿದೆ. ದಲಿತರು ಮತ್ತು ಕ್ರಿಶ್ಚಿಯನ್ನರು ಕೂಡ ಕಳೆದ 30 ವರ್ಷಗಳಿಂದ ವಾಸಿಸುತ್ತಿದ್ದಾರೆಂದು ಹೇಳಿದ್ದಾರೆ.
ಘಟನೆ ಬಳಿಕ ರಾಜೀವ್ ಗಾಂಧಿ ವಸತಿ ನಿಗಮದ (RGHC) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ನಿವಾಸಿಗಳು ವಸತಿಗಾಗಿ ಆಶಿಸುತ್ತಿದ್ದಾರೆಂದು ತಿಳಿಸಿದ್ದಾರೆ.
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿದ ರಾಜೀವ್ ಗಾಂಧಿ ವಸತಿ ನಿಗಮದ ಹಿರಿಯ ಅಧಿಕಾರಿಯೊಬ್ಬರು, ಸರ್ಕಾರವು ರಾಜೀವ್ ಗಾಂಧಿ ವಸತಿ ನಿಗಮ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಕಂದಾಯ ಇಲಾಖೆಗೆ ಸಮೀಕ್ಷೆ ನಡೆಸಲು ನಿರ್ದೇಶನ ನೀಡಿದೆ. ಸ್ಥಳದ ದಾಖಲೆಗಳು ಮತ್ತು ಜಿಪಿಎಸ್ ಸ್ಥಳವನ್ನು ಎರಡು ದಿನಗಳಲ್ಲಿ ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
Advertisement