
ಬೆಂಗಳೂರು: ಪ್ರಮುಖ ಬೆಳವಣಿಗೆಯೊಂದರಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಮಾವೋವಾದಿ ಕೋಟೆ ಹೊಂಡ ರವಿ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಶನಿವಾರ ತಿಳಿಸಿದೆ.
ಇತ್ತೀಚೆಗಷ್ಟೇ ಶರಣಾದ ಆರು ಮಂದಿ ನಕ್ಸಲರ ತಂಡದಲ್ಲಿ ಕೋಟೆ ಹೊಂಡ ರವಿ ಇದ್ದರು. ಆದರೆ, ವಿಕ್ರಂ ಗೌಡ ಅವರ ಎನ್‌ಕೌಂಟರ್ ಸಂದರ್ಭದಲ್ಲಿ ತಂಡದಿಂದ ಬೇರ್ಪಟ್ಟಿದ್ದ ರವಿ ಇದೀಗ ಪೊಲೀಸರ ಮುಂದೆ ಶರಣಾಗಿದ್ದಾರೆ.
ಈ ಬೆಳವಣಿಗೆಗೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ನೆಮ್ಮಾರ್ ಫಾರೆಸ್ಟ್ ಐಬಿಯಲ್ಲಿ ನಕ್ಸಲ್ ಕೋಟೆಹೊಂಡ ರವಿ ಶರಣಾಗಿದ್ದಾರೆ ಎಂದಿದ್ದಾರೆ.
ಶರಣಾಗತಿ ಪ್ರಕ್ರಿಯೆ ಪೂರ್ಣಗೊಳಿಸಲು ರವಿಯನ್ನು ಚಿಕ್ಕಮಗಳೂರಿಗೆ ಕರೆತರಲಾಗುತ್ತಿದೆ. 'ದೀರ್ಘಕಾಲದಿಂದ ತಲೆಮರೆಸಿಕೊಂಡಿರುವ ಭೂಗತ ನಕ್ಸಲ್ ತೊಂಬಟ್ಟು ಲಕ್ಷ್ಮಿ ಫೆಬ್ರುವರಿ 2ರಂದು ಚಿಕ್ಕಮಂಗಳೂರು ಅಥವಾ ಉಡುಪಿಯಲ್ಲಿ ಶರಣಾಗಲಿದ್ದಾರೆ. ಇದೀಗ ‘ನಕ್ಸಲ್ ಶರಣಾಗತಿ’ ಕಾರ್ಯಾಚರಣೆ ಪೂರ್ಣಗೊಂಡಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ರಾಜ್ಯವನ್ನು ನಕ್ಸಲ್ ಮುಕ್ತಗೊಳಿಸಲು ಅವಿರತ ಪ್ರಯತ್ನ ನಡೆಸಿದ 22 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಪದಕವನ್ನು ಘೋಷಿಸಿದ್ದಾರೆ.
ಜನವರಿ 8 ರಂದು, ಕೆಲವು ಮಾವೋವಾದಿಗಳು ಶರಣಾದಾಗ ಸಿದ್ದರಾಮಯ್ಯ ಅವರಿಗೆ ಬೆಂಗಳೂರಿನಲ್ಲಿ ಗುಲಾಬಿ ಮತ್ತು ಸಂವಿಧಾನದ ಪ್ರತಿಗಳನ್ನು ನೀಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ಸ್ವಾಗತಿಸಿದರು.
Advertisement