
ಮಂಡ್ಯ: ಸರ್ಕಾರಿ ಶಾಲೆಯ ಶೌಚಾಲಯದಲ್ಲಿ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಸೋಮವಾರ ಪೋಕ್ಸೋ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಜನವರಿ 31 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಕೇಕ್ ಕೊಡಿಸಿ, ಚಾಕು ಹಾಕುವುದಾಗಿ ಬೆದರಿಸಿ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು ಎಂದು ಹೇಳಲಾಗಿದೆ.
ತನ್ನ ಮೇಲಾದ ದುಷ್ಕೃತ್ಯವನ್ನು ಬಾಲಕಿ ಯಾರೊಂದಿಗೆ ಹೇಳಿಕೊಂಡಿರಲಿಲ್ಲ. ಬಾಲಕಿ ಋತುಮತಿಯಾಗಿ ಎರಡು ದಿನ ಕಳೆದರೂ ಆಕೆಗೆ ಹೊಟ್ಟೆ ನಾವು, ರಕ್ತಸ್ರಾವ ನಿಂತಿರಲಿಲ್ಲ. ಇದರಿಂದ ಅನುಮಾನಗೊಂಡ ಬಾಲಕಿ ಚಿಕ್ಕಮ್ಮ ಬಂದು ವಿಚಾರಿಸಿದಾಗ ಬಾಲಕಿ ನಡೆದ ಘಟನೆ ವಿವರಿಸಿದ್ದಾಳೆ. ಚಿಕ್ಕಮ್ಮನ ಬಳಿ ಕಾಮಾಂಧರ ದುಷ್ಕೃತ್ಯದ ಬಗ್ಗೆ ಬಾಲಕಿ ಬಾಯಿಬಿಟ್ಟಿದ್ದಾಳೆ.
ಸದ್ಯ ಅಸ್ವಸ್ಥ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಬಂದ ಪೊಲೀಸರು ಬಾಲಕಿಯ ಆರೋಗ್ಯ ವಿಚಾರಣೆ ನಡೆಸಿದ್ದು, ಮಾತ್ರವಲ್ಲದೇ ನಂತರ ಬಾಲಕಿಯ ಆರೋಗ್ಯದ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಪೋಕ್ಸೋ ಪ್ರಕರಣ ದಾಖಲು
ಇನ್ನು ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಬಾಲಕಿ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಭಾನುವಾರ ಬಾಲಕಿಯ ತಾಯಿ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ ಎನ್ನಲಾಗಿದೆ.
ಶೌಚಾಲಯಕ್ಕೆ ಎಳೆದೊಯ್ದಿದ್ದ ದುಷ್ಕರ್ಮಿಗಳು
ದೂರಿನಲ್ಲಿ ಸರ್ಕಾರಿ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಲಕಿಯನ್ನು ಇಬ್ಬರು ಹುಡುಗರು ಶೌಚಾಲಯಕ್ಕೆ ಕರೆದೊಯ್ದಿದ್ದಾರೆ. ಬಳಿಕ ಬಟ್ಟೆ ತೆಗೆಯುವಂತೆ ಬೆದರಿಸಿ, ನಂತರ ಕೋಲಿನಿಂದ ಹೊಡೆದಿದ್ದಾರೆ ಎಂದು ಸಂತ್ರಸ್ಥೆ ಆರೋಪಿಸಿದ್ದಾಳೆ. ಅಲ್ಲದೆ ಆಕೆಯ ಖಾಸಗಿ ಭಾಗಗಳಿಗೂ ಹೊಡೆದಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.
ಆಕೆ ಗುರುತಿಸಿದ ಹುಡುಗರಲ್ಲಿ ಒಬ್ಬ ಆಕೆಯ ಸಹಪಾಠಿಯಾಗಿದ್ದು, ಇನ್ನೊಬ್ಬ ಉನ್ನತ ತರಗತಿಯವನು ಎಂದು ಹೇಳಲಾಗಿದೆ. ಆರೋಪಿ ವಿದ್ಯಾರ್ಥಿಗಳು ಘಟನೆಯನ್ನು ಯಾರಿಗೂ ಹೇಳದಂತೆ ಆಕೆಗೆ ಬೆದರಿಕೆ ಹಾಕಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ, ಆದರೆ ನಂತರ ಅವಳು ತನ್ನ ತಾಯಿಗೆ ಘಟನೆ ಹೇಳಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯ ಹೇಳಿಕೆಯ ಆಧಾರದ ಮೇಲೆ, ಇಬ್ಬರು ಹುಡುಗರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ (ಪೋಕ್ಸೋ) ಪ್ರಕರಣ ದಾಖಲಿಸಲಾಗಿದ್ದು, ಘಟನೆಗಳ ಅನುಕ್ರಮವನ್ನು ಖಚಿತಪಡಿಸಿಕೊಳ್ಳಲು ಮತ್ತು ಸತ್ಯಗಳನ್ನು ಪರಿಶೀಲಿಸಲು ತನಿಖೆ ನಡೆಯುತ್ತಿದೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ತನಿಖೆಯ ಭಾಗವಾಗಿ, ಪೊಲೀಸರು ಶಾಲಾ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪರಿಶೀಲಿಸಲಾಗುತ್ತಿದೆ. ಬಾಲಕಿಯ ವೈದ್ಯಕೀಯ ಪರೀಕ್ಷಾ ವರದಿಯಲ್ಲಿ ಖಾಸಗಿ ಭಾಗಗಳಲ್ಲಿ ಅಂತಹ ಯಾವುದೇ ಗಾಯವಾಗಿರುವುದು ಕಂಡುಬಂದಿಲ್ಲ. ಆಕೆಯ ಹೇಳಿಕೆಯಲ್ಲಿ ಕೆಲವು ಅಸಂಗತತೆಗಳಿವೆ. ಬಾಲಕರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತದೆ ಮತ್ತು ಅದರ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
Advertisement