
ಧಾರವಾಡ: ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗ ಧಾರವಾಡ ಹೈಕೋರ್ಟ್ ಪೀಠ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣ ರದ್ದುಪಡಿಸುವಂತೆ ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನ್ಯಾ.ಎಂ ನಾಗಪ್ರಸನ್ನ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದ್ದಾರೆ. ಆದರೆ, ಈ ಪ್ರಕರಣ ರದ್ದು ಮಾಡಲು ನಿರಾಕರಿಸಿದೆ.
ಪೋಕ್ಸೊ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಲಾಗಿದೆ ಎಂದು ಪೀಠ ಆದೇಶಿಸಿದೆ.
ಎಫ್‌ಐಆರ್, ಸಿಐಡಿ ತನಿಖೆ ನಡೆಸಿ ಸಲ್ಲಿಸಿರುವ ಆರೋಪ ಪಟ್ಟಿ ಹಾಗೂ ಅದನ್ನು ಆಧರಿಸಿ ವಿಚಾರಣಾ ನ್ಯಾಯಾಲಯ 4.7.2024ರಂದು ಸಂಜ್ಞೇ ಪರಿಗಣಿಸಿರುವ ಆದೇಶ ಪ್ರಶ್ನಿಸಿದ್ದ ಬಿಎಸ್‌ವೈ ಅರ್ಜಿಯನ್ನು ಭಾಗಶಃ ಪುರಸ್ಕರಿಸಲಾಗಿದೆ. ವಿಚಾರಣಾ ನ್ಯಾಯಾಲಯವು ಸಂಜ್ಞೇ ಪರಿಗಣಿಸಿರುವ ಆದೇಶವನ್ನು ಯಡಿಯೂರಪ್ಪ ಅವರಿಗೆ ಸೀಮಿತವಾಗಿ ವಜಾ ಮಾಡಲಾಗಿದೆ. ಅಪರಾಧ, ತನಿಖೆ, ಅಂತಿಮ ವರದಿ ಎಲ್ಲವೂ ಹಾಗೆ ಉಳಿಯಲಿದೆ.
ಈ ಆದೇಶದ ಸಮಯದಲ್ಲಿ ಮಾಡಿದ ಅವಲೋಕನಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮ ವರದಿಗೆ ಸಂಬಂಧಿಸಿದಂತೆ ಆದೇಶ ಮಾಡಲು ಪ್ರಕರಣವನ್ನು ಮತ್ತೆ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.
ಇದರಿಂದ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆಯಾದರೂ ಈ ಪ್ರಕರಣದಿಂದ ಎದುರಾಗಿರುವ ಸಂಕಷ್ಟ ಇನ್ನೂ ತಪ್ಪಿಲ್ಲ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ಕಳೆದ 2024 ಮಾರ್ಚ್ 14ರ ರಾತ್ರಿ ಬೆಂಗಳೂರಿನ ಸದಾಶಿವ ನಗರ ಠಾಣೆಗೆ ಆಗಮಿಸಿದ್ದ ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಹಿಂದೆ, ತಮ್ಮ 17 ವರ್ಷದ ಮಗಳ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು ಎನ್ನುವ ಆರೋಪ ಮಾಡಿ ಮಹಿಳೆ ದೂರು ನೀಡಲಾಗಿತ್ತು. ಆದರೆ, ಯಾವುದೇ ಕ್ರಮ ಜರುಗಿರಲಿಲ್ಲ.
ಫೆಬ್ರವರಿ 2ರಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಮನೆಗೆ ತನ್ನ ಮಗಳ ಜತೆ ತೆರಳಿದ್ದ ಸಂದರ್ಭದಲ್ಲಿ ಬಾಲಕಿ ಜತೆ ಯಡಿಯೂರಪ್ಪ ಅನುಚಿತವಾಗಿ ವರ್ತಿಸಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ, ಯಡಿಯೂರಪ್ಪನವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು.
Advertisement