
ಮೈಸೂರು: ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಪ್ರಕರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಸತ್ಯಮೇವ ಜಯತೆ ಎಂದು ಕಾಂಗ್ರೆಸ್ ಹೇಳಿದೆ.
'ಸತ್ಯಮೇವ ಜಯತೆ' ಫಲಕಗಳನ್ನು ಹಿಡಿದ ಕಾಂಗ್ರೆಸ್ ಕಾರ್ಯಕರ್ತರು ಮೈಸೂರಿನಲ್ಲಿ ಪಕ್ಷದ ಕಚೇರಿಯ ಬಳಿ ಮೆರವಣಿಗೆ ನಡೆಸಿ, ಸಿಎಂ ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು.
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಅವರು ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಪ್ರಕರಣ ಸಂಬಂಧ ನಾವು ನಿರೀಕ್ಷೆ ಮಾಡಿದಂತೆ ಸತ್ಯದ ಪರ ತೀರ್ಪು ಬಂದಿದೆ. ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ ಎನ್ನುವುದಕ್ಕೆ ನ್ಯಾಯಾಲಯದ ತೀರ್ಪು ಸಾಕ್ಷಿಯಾಗಿದೆ ಎಂದು ಹೇಳಿದರು.
ಮಧ್ಯವರ್ತಿಗಳ ಮೂಲಕ ಸರ್ಕಾರ ಬೀಳಿಸುವ ಪ್ರಯತ್ನ ಮಾಡಲಾಗಿತ್ತು. ಜೊತೆಗೆ ಮುಡಾ ಹಗರಣ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿನಾಕಾರಣ ಟೀಕಿಸುವ ಜತೆಗೆ ಅವರನ್ನು ಹಗರಣದಲ್ಲಿ ಸಿಲುಕಿಸಲು ಮುಂದಾಗಿದ್ದ ಬಿಜೆಪಿ-ಜೆಡಿಎಸ್ ನಾಯಕರಿಗೆ ಮುಖಭಂಗವಾಗಿದೆ ಎಂದು ತಿಳಿಸಿದರು.
ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಹಸ್ತಕ್ಷೇಪ ಇಲ್ಲ ಎಂಬುದು ನಮಗೆ ಗೊತ್ತಿತ್ತು. ನಮ್ಮ ನಿವೇಶನ ಕಿತ್ತುಕೊಂಡು ನಮಗೆ ಮೋಸ ಮಾಡುವ ಕೆಲಸ ಆಗಿತ್ತು. ಮಧ್ಯವರ್ತಿಗಳ ಮೂಲಕ ಸೈಟ್ ಕಿತ್ತುಕೊಳ್ಳಲು ಮುಂದಾಗಿದ್ದರು. ಸರ್ಕಾರ ಬೀಳಿಸಬೇಕು, ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದೇ ಇವರ ಉದ್ದೇಶವಾಗಿತ್ತು. ಸ್ನೇಹಮಯಿ ಕೃಷ್ಣ ಕೂಲಿಗಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಒಂದಿಷ್ಟು ಹಣ ಕೊಟ್ಟಿರುತ್ತಾರೆ. ಜೊತೆಗೆ ತನಿಖಾ ಸಂಸ್ಥೆಗೆ ಪ್ರಭಾವ ಬೀರಲು ಇಡಿ ಮುಂದಾಗಿದೆ. ಸಿದ್ದರಾಮಯ್ಯಗೆ ಕೆಟ್ಟ ಹೆಸರು ತರುವುದು ಇಡಿ ಉದ್ದೇಶ. ಇಡಿ ಅಧಿಕಾರಿಗಳು ಇಲ್ಲಿಗೆ ತನಿಖೆ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಸ್ನೇಹಮಯಿ ಕೃಷ್ಣ ಮೇಲ್ ಮಾಡಿದ ತಕ್ಷಣ ಎಫ್‌ಐಆರ್ ಮಾಡಲಾಗುತ್ತದೆ. ಒಂದು ತನಿಖಾ ಸಂಸ್ಥೆ ತನಿಖೆ ಮಾಡುವಾಗ ಮತ್ತೊಂದು ತನಿಖಾ ಸಂಸ್ಥೆ ತನಿಖೆ ಮಾಡಲು ಯಾವ ಕಾನೂನಿನಲ್ಲೂ ಅವಕಾಶ ಇಲ್ಲ. ಹೈಕೋರ್ಟ್‌ನಲ್ಲಿ ದೊಡ್ಡ ವಕೀಲರನ್ನು ಕರೆ ತಂದು ವಾದ ಮಾಡಿಸುತ್ತಾರೆ. ಅವರಿಗೆ ಫೀಸ್ ಕೊಡಲು ಹಣ ಎಲ್ಲಿಂದ ಬಂತು? ಮುಂದಿನ ದಿನಗಳಲ್ಲಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋದರೆ ಅಲ್ಲಿಯೂ ನಾವು ಹೋರಾಟ ಮಾಡುತ್ತೇವೆ ಎಂದರು.
ಮುಡಾ ಮಾಜಿ ಅಧ್ಯಕ್ಷ ರಾಜೀವ್ ಅವರು ಮಾತನಾಡಿ, ಮುಡಾ ಮಂಡಳಿ ತೆಗೆದುಕೊಂಡ ನಿರ್ಧಾರವನ್ನು ಸಿಎಂ ನಿರ್ಧಾರ ಎಂದು ಬಿಂಬಿಸಲು ಪ್ರಯತ್ನಗಳು ನಡೆದಿವೆ ಎಂದು ಹೇಳಿದರು.
ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ವಿರೋಧ ಪಕ್ಷಗಳ ಸೇಡಿನ ರಾಜಕಾರಣಕ್ಕೆ ಉಚ್ಛ ನ್ಯಾಯಾಲಯ ತಕ್ಕ ಉತ್ತರ ನೀಡಿದೆ. ಈಗಾಗಲೇ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿರುವ ಪ್ರಕರಣವನ್ನು 'ಸಿಬಿಐ'ಗೆ ವಹಿಸುವಂತೆ ಕೋರಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧದ ರಾಜಕೀಯ ಪಿತೂರಿಗೆ ಕೊನೆ ಹಾಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರ ಆಡಳಿತ, ಜನಪ್ರಿಯತೆಯನ್ನು ಸಹಿಸದ ಬಿಜೆಪಿ - ಜೆಡಿಎಸ್ ಪಕ್ಷಗಳ ಪೂರ್ವಯೋಜಿತ ಷಡ್ಯಂತ್ರ ತನಿಖೆಯಿಂದ ಬಯಲಾಗಲಿದೆ ಎಂದು ಹೇಳಿದೆ.
Advertisement