
ಚಾಮರಾಜನಗರ: KSRTC ಬಸ್ ಚಾಲಕರೊಬ್ಬರು ಮೂರ್ಛೆ ಬಂದು ಪ್ರಜ್ಞೆ ತಪ್ಪಿದ ಪರಿಣಾಮ ಬಸ್ ಮರಕ್ಕೆ ಡಿಕ್ಕಿ ಹೊಡೆದು ಪ್ರಯಾಣಿಕರು ಗಾಯಗೊಂಡ ಘಟನೆ ಜಿಲ್ಲೆಯ ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ಸಮೀಪ ಭಾನುವಾರ ನಡೆದಿದೆ.
ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ಚಾಲಕನಿಗೆ ದಿಢೀರ್ ಮೂರ್ಛೆ ರೋಗ ಕಾಣಿಸಿಕೊಂಡಿದೆ. ಪರಿಣಾಮ, ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದು, ಮುಂಭಾಗದ ಗಾಜು ನಜ್ಜುಗುಜ್ಜಾಗಿದೆ. ಇದರಿಂದ ಬಸ್ ಮುಂಭಾಗದಲ್ಲಿಯೇ ಕುಳಿತಿದ್ದ ಐವರು ಪ್ರಯಾಣಿಕರು ಸೇರಿದಂತೆ 6 ಮಂದಿಗೆ ಗಾಯಗಳಾಗಿವೆ.
ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯದೇ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯ ಎಡಭಾಗಕ್ಕೆ ಪಲ್ಟಿಯಾಗಿದ್ದರೆ ಅಪಾರ ಪ್ರಮಾಣದ ಸಾವು ನೋವಾಗುವ ಸಾಧ್ಯತೆ ಇತ್ತೆಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
Advertisement