
ಬೆಂಗಳೂರು: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಲಘು ಧಾಟಿಯ ಸಂವಾದಕ್ಕೆ ಇಂದು ಇನ್ವೆಸ್ಟ್ ಕರ್ನಾಟಕ (Invest Karnataka) ಉದ್ಘಾಟನಾ ವೇದಿಕೆ ಸಾಕ್ಷಿಯಾಯಿತು.
ಸಿಎಂ ಸಿದ್ದರಾಮಯ್ಯ ಅವರ ಮಂಡಿಗೆ ಪೆಟ್ಟಾಗಿದ್ದು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ಆಗಿದ್ದರು, ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಮಂಡಿ ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಸಿಎಂ ಸಿದ್ದರಾಮಯ್ಯ ಇಂದು ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮಕ್ಕೆ ವ್ಹೀಲ್ ಚೇರ್ ನಲ್ಲಿ ಆಗಮಿಸಿದ್ದರು. ವೇದಿಕೆಯಲ್ಲಿ ಸಿದ್ದರಾಮಯ್ಯ ಬಳಿ ಕುಳಿತಿದ್ದ ರಾಜನಾಥ್ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ.
ಈ ವೇಳೆ ಮಾತನಾಡುತ್ತಾ, ಎಚ್ಚರಿಕೆಯಿಂದ ಹೆಜ್ಜೆ ಇಡಿ, ನಿಮ್ಮ ಕಾಲು ಜೋಪಾನ ಎಂದು ಮಾರ್ಮಿಕವಾಗಿ ನುಡಿದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಭಾಷಣದಲ್ಲಿ ಲಘು ಹಾಸ್ಯಧಾಟಿಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್ ಸಿದ್ದರಾಮಯ್ಯ ಎಲ್ಲಾ ಅಡೆತಡೆಗಳನ್ನೂ ದಾಟಲಿದ್ದಾರೆ ಎಂದು ಲಘುಧಾಟಿಯಲ್ಲಿ ಹೇಳಿದರು. ಬೆಂಗಳೂರಿಗೆ ನಾನು ಆಗಮಿಸುತ್ತಿದ್ದಂತೆಯೇ ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಪೆಟ್ಟಾಗಿರುವುದು ತಿಳಿಯಿತು. ಈಗ ಅವರು ಇಲ್ಲಿರುವುದನ್ನು ನೋಡಿ ಖುಷಿಯಾಗುತ್ತಿದೆ. ಅವರು ಬೇಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
"ರಾಜಕೀಯದಲ್ಲಿ ಕಾಲುಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಮುಖ್ಯ. ನೀವು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ, ಏಕೆಂದರೆ ಎಲ್ಲೆಡೆ ಅಡೆತಡೆಗಳಿರುತ್ತವೆ. ಎಂದು ರಾಜನಾಥ್ ಸಿಂಗ್ ಹೇಳಿದ್ದು ಸಭಿಕರು, ಸಾರ್ವಜನಿಕರು ನಗೆಗಡಲಲ್ಲಿ ತೇಲುವಂತೆ ಮಾಡಿತು.
ರಾಜನಾಥ್ ಸಿಂಗ್ ಅವರ ಮಾತುಕಗಳನ್ನು ಸಿಎಂ ಸಿದ್ದರಾಮಯ್ಯ ಮುಗುಳುನಗೆಯೊಂದಿಗೆ ಸ್ವೀಕರಿಸಿದರು. "ಸಿದ್ದರಾಮಯ್ಯ ಒಬ್ಬ ಅನುಭವಿ ರಾಜಕಾರಣಿ ಮತ್ತು ಅವರು ತಮ್ಮ ದಾರಿಯಲ್ಲಿನ ಎಲ್ಲಾ ಅಡೆತಡೆಗಳನ್ನು ಸುರಕ್ಷಿತವಾಗಿ ದಾಟುತ್ತಿದ್ದಾರೆ ಮತ್ತು ಇಂದು ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾರೆ. ಈ ಗಾಯದಿಂದ ಅವರು ಬೇಗನೆ ಚೇತರಿಸಿಕೊಳ್ಳುತ್ತಾರೆ ಎಂದು ನನಗೆ ತುಂಬಾ ವಿಶ್ವಾಸವಿದೆ. ಅವರು ಬೇಗನೆ ಗುಣಮುಖರಾಗಲಿ ಎಂದು ನಾನು ಬಯಸುತ್ತೇನೆ" ಎಂದು ಸಿಂಗ್ ಹೇಳಿದರು.
ರಾಜಕೀಯ ರಂಗದಲ್ಲಿ, ಸಿಎಂ ಸಿದ್ದರಾಮಯ್ಯ ಸದ್ಯಕ್ಕೆ ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ತಮ್ಮ ಪತ್ನಿ ಪಾರ್ವತಿ ಬಿ.ಎಂ. ಅವರಿಗೆ 14 ನಿವೇಶನಗಳನ್ನು ಹಂಚಿಕೆ ಮಾಡುವಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಇದಲ್ಲದೆ, ಸಂಪುಟ ಪುನರ್ರಚನೆಯ ಊಹಾಪೋಹಗಳ ನಡುವೆ, ಕೆಲವು ಕಾಂಗ್ರೆಸ್ ನಾಯಕರು ಇತ್ತೀಚೆಗೆ ಸಿಎಂ ಕುರ್ಚಿಗಾಗಿ ಬಹಿರಂಗವಾಗಿ ಹಕ್ಕು ಮಂಡಿಸುತ್ತಿದ್ದಾರೆ.
Advertisement