ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ಅಂತಿಮವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಿದ್ದಾರೆ. ಈ ವೇಳೆ ಹಲವು ಸಲಹೆಗಳನ್ನು ನೀಡಲಾಗಿದ್ದು ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯಪಾಲರ ಅನುಮೋದನೆಗಾಗಿ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನು ಕಳುಹಿಸಿತ್ತು. ಆದರೆ ರಾಜಭವನ ಕೆಲ ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ಸುಗ್ರೀವಾಜ್ಞೆಯನ್ನು ವಾಪಸ್ ಕಳುಹಿಸಿತ್ತು. ಮೈಕ್ರೋ ಫೈನಾನ್ಸ್ ಕಿರುಕುಳದಿಂದಾಗಿ ಹಲವರು ಆತ್ಮಹತ್ಯೆಗೆ ಶರಣಾಗಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಡಿವಾಣ ಹಾಕಲು ಮುಂದಾಗಿದೆ. ಮುಂದಿನ ಅಧಿವೇಶನದಲ್ಲಿ ಅದರ ಸಾಧಕ-ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡಿ ನಿರ್ಧಾರ ಮಾಡಬೇಕಿದೆ.
ನಮ್ಮ ಮೆಟ್ರೋ ಪ್ರಯಾಣ ದರವನ್ನು ಏಕಾಏಕಿ ದುಪ್ಪಟ್ಟು ಹೆಚ್ಚು ಮಾಡಿದ್ದು, ಇದಕ್ಕೆ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ದರ ಏರಿಕೆಯಿಂದಾಗಿ ಜನ ರೊಚ್ಚಿಗೆದ್ದಿದ್ದು, ಇಷ್ಟೊಂದು ಹೆಚ್ಚಳ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಮೆಟ್ರೋ ದರ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿದ ಬೆನ್ನಲ್ಲೆ ಕಾಂಗ್ರೆಸ್ ಸಹ ಬುಧವಾರ ಪ್ರತಿಭಟನೆ ನಡೆಸಿದೆ. ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯ ಶಿಫಾರಸ್ಸಿನಂತೆ ಮೋದಿ ಸರ್ಕಾರ ಅವೈಜ್ಞಾನಿಕವಾಗಿ ಮೆಟ್ರೋ ದರವನ್ನು ಏರಿಕೆ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ ಸತ್ಯವನ್ನು ಮುಚ್ಚಿಟ್ಟು ರಾಜ್ಯ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಬೊಟ್ಟು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮೆಟ್ರೋ ದರ ಏರಿಕೆ ಬೆನ್ನಲ್ಲೇ ಒಂದೇ ದಿನ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ 80 ಸಾವಿರ ಕಡಿಮೆಯಾಗಿದೆ.
ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಶಾಂತಿನಗರದ ನಿವಾಸಿಗಳಾದ ಸುಹೇಲ್ ರಹಿಲ್ ಪಾಶಾ, ಅಯಾನ್ ಬಿನ್ ಜಬೀವುಲ್ಲಾ, ಗೌಸಿಯಾ ನಗರದ ಸೈಯದ್ ಸಾದಿಕ್ ಬಿನ್ ನವೀದ್, ಸತ್ಯನಗರದ ಇಜಾಜ್ ಬಿನ್ ಅಬ್ದುಲ್ ವಾಜೀದ್, ರಾಜೀವ್ ನಗರದ ಸಾದಿಕ್ ಪಾಶಾ ಅಲಿಯಾಸ್ ಖಾಲಿದ್ ಪಾಷಾ ಸೇರಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮೌಲ್ವಿಯೊಬ್ಬರ ಪ್ರಚೋದನಕಾರಿ ಭಾಷಣದ ವಿಡಿಯೋ ವೈರಲ್ ಆದ ಬಳಿಕ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಹಿನ್ನಲೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಮುಫ್ತಿ ಮುಷ್ತಾಕ್ ಮಕ್ಬೋಲಿ ಎಂಬ ಮೌಲ್ವಿಯ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಎರಡು ದಿನದಲ್ಲಿ 5 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಗಳ ಪ್ರಸ್ತಾವನೆ ಬಂದಿವೆ. ಆ ಪೈಕಿ ಶೇ 70ರಷ್ಟು ವ್ಯವಹಾರ ಪ್ರಸ್ತಾವನೆಗಳನ್ನು ಸಾಕಾರಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ. ರಾಜ್ಯದಲ್ಲಿ ಟಿವಿಎಸ್ ಕಂಪನಿ 2 ಸಾವಿರ ಕೋಟಿ ರೂಪಾಯಿಯನ್ನು ಮುಂದಿನ 5 ವರ್ಷಗಳಲ್ಲಿ ಹೂಡಿಕೆ ಮಾಡಲಿದೆ. ಈ ಸಮಾವೇಶದಲ್ಲಿ JSW, ಮಹಿಂದ್ರ ಅಂಡ್ ಮಹೀಂದ್ರ, ಬಲ್ಟೊಟಾ, ಯುರೋಪ್ ಫ್ಯೂಚರ್ ಸೇರಿದಂತೆ ಹಲವು ಕಂಪನಿಗಳು ರಾಜ್ಯದಲ್ಲಿ ಸಾವಿರಾರು ಕೋಟಿ ರೂ. ಬಂಡವಾಳ ಹೂಡಲಿವೆ. ಹಸಿರು ಇಂಧನ ವಲಯದಲ್ಲಿ ಹೆಚ್ಚಿನ ಹೂಡಿಕೆಗಳಾಗುತ್ತಿರುವುದು ವಿಶೇಷವಾಗಿದೆ. ಅಲ್ಲದೆ, ಬಾಗಲಕೋಟೆಯಲ್ಲಿ ಅತ್ಯಾಧುನಿಕ ಪಾಲಿಲ್ಯಾಕ್ಟಿಕ್ ಆಸಿಡ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿರಾಣಿ ಶುಗರ್ಸ್ ಕರ್ನಾಟಕ ಸರ್ಕಾರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಕಂಪನಿ ತಿಳಿಸಿದೆ.
ಭೀಮಾ ತೀರದ ಕುಖ್ಯಾತ ಹಂತಕ ಚಂದಪ್ಪ ಹರಿಜನ ಸಹಚರ ಹಾಗೂ ಸಹೋದರ ಸಂಬಂಧಿ ಬಾಗಪ್ಪ ಹರಿಜನ್ ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ 8-50ರ ಸುಮಾರಿನಲ್ಲಿ ವಿಜಯಪುರದ ಮದಿನಾ ನಗರದಲ್ಲಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬಾಗಪ್ಪ ಹರಿಜನ್ ಮುಖ, ತಲೆ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ SP ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಂತಕರ ಪತ್ತೆಗಾಗಿ ASP ರಾಮನಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದೆ. ಬಾಗಪ್ಪನ ಹತ್ಯೆಯ ಹಿಂದೆ ಪಿಂಟ್ಯಾ ಎಂಬ ವ್ಯಕ್ತಿಯ ಹೆಸರು ಕೇಳಿಬಂದಿದೆ.
Advertisement