ನಮ್ಮ ಮೆಟ್ರೋ ಪ್ರಯಾಣ ದರ ದುಪ್ಪಟ್ಟು ಏರಿಕೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಎಚ್ಚೆತ್ತ ಬಿಎಂಆರ್ಸಿಎಲ್ ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೆಟ್ರೋ ಪ್ರಯಾಣ ದರ ಪರಿಷ್ಕರಿಸುವಂತೆ ಬಿಎಂಆರ್ಸಿಎಲ್ ಗೆ ಇಂದು ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಬಿಎಂಆರ್ ಸಿಎಲ್ ಎಂಡಿ ಮಹೇಶ್ವರ್ ರಾವ್, ಕನಿಷ್ಠ 10 ರೂ. ಹಾಗೂ ಗರಿಷ್ಠ 90 ರೂಪಾಯಿ ಏರಿಕೆ ಹಾಗೇ ಇರುತ್ತದೆ. ನಮ್ಮ ಮೆಟ್ರೋ ಪ್ರಯಾಣ ದರ ಸ್ಟೇಜ್ ಆಧಾರದಲ್ಲಿ ಇಳಿಕೆ ಮಾಡಲಾಗುವುದು. ಮೆಟ್ರೋ ದರ ಶೇ. 90ರಿಂದ ಶೇ 100ರವರೆಗೆ ಹೆಚ್ಚಳವಾಗಿರುವ ನಿಲ್ದಾಣಗಳ ಮಧ್ಯೆ ಇಳಿಕೆ ಮಾಡಲಾಗುವುದು. ಶೇ. 60ರಷ್ಟು ದರ ಹೆಚ್ಚಳವಾಗಿರುವಲ್ಲಿ ಸ್ಲ್ಯಾಬ್ ಮರ್ಜ್ ಮಾಡುತ್ತೇವೆ. ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಹಾಲಕ್ಕಿ ಸಮುದಾಯದ ಜನಪದ ಹಾಡುಗಳನ್ನು ಹಾಡುವುದರ ಜೊತೆಗೆ ಮದ್ಯಪಾನ ವಿರೋಧಿ ಹೋರಾಟದಿಂದ ಖ್ಯಾತಿಗಳಿಸಿದ್ದ ಅಂಕೋಲಾ ತಾಲ್ಲೂಕು ಬಡಗೇರಿಯ 88 ವರ್ಷದ ಸುಕ್ರಿ ಬೊಮ್ಮಗೌಡ ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೆಮ್ಮೆಯ ಸುಕ್ರಜ್ಜಿ ಎಂದೇ ಪ್ರಸಿದ್ದರಾಗಿದ್ದ, ನಡೆದಾಡುವ ವಿಶ್ವಕೋಶ ಎಂದು ಕರೆಯಲ್ಪಡುತ್ತಿದ್ದ ಸುಕ್ರಿ ಬೊಮ್ಮಗೌಡ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವು ದಿನದ ಹಿಂದೆ ಉಸಿರಾಟ ಸಮಸ್ಯೆಯಿಂದ ಉಡುಪಿಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದರು. ಅವರು ಸುಮಾರು 5,000 ಜಾನಪದ ಗೀತೆಗಳನ್ನು ಕಂಠಪಾಠ ಮಾಡಿದ್ದರು ಮತ್ತು ಹಲವಾರು ಸಾಮಾಜಿಕ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಸುಕ್ರಜ್ಜಿ ಚಿಕ್ಕ ವಯಸ್ಸಿನಲ್ಲಿಯೇ ತನ್ನ ಗಂಡನನ್ನು ಕಳೆದುಕೊಂಡರು. ಮದ್ಯದ ಚಟದಿಂದ ಬಳಲುತ್ತಿದ್ದ ಬೊಮ್ಮಗೌಡ, ಸುಕ್ರಿ ಕೇವಲ 16 ವರ್ಷದವಳಿದ್ದಾಗ 46 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಸಾವು ಅವರ ಸಮುದಾಯದೊಳಗೆ ಸಾಮಾಜಿಕ ಚಳುವಳಿಗಳನ್ನು ಮುನ್ನಡೆಸಲು ಪ್ರೇರೇಪಿಸಿತು. ಸುಕ್ರಜ್ಜಿ ನಿಧನ ಸಾಂಸ್ಕೃತಿಕ ಲೋಕಕ್ಕೆ ಆಗಿರುವ ನಷ್ಟ ತುಂಬಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನ ಹಿರಿಯ ಪೊಲೀಸ್ ಅಧಿಕಾರಿ ಗೋವರ್ಧನ್ ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಗೋವರ್ಧನ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ, ತನ್ನ ಪತಿ ಮತ್ತು ಆತನ ಪ್ರೇಯಸಿ ಸೇರಿಕೊಂಡು ತನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ ಎಂದು ಅಮೃತಾ ದೂರಿದ್ದಾರೆ. ಫೋನ್ ಕಾಲ್, ಮೆಸೇಜ್ ಬಗ್ಗೆ ಪ್ರಶ್ನಿಸಿದ್ದಕ್ಕೆ ನನ್ನ ಗಂಡ ನನಗೆ ಹೊಡೆದು ಹಿಂಸೆ ನೀಡಿದರು. ಅಲ್ಲದೇ ಮಹಿಳಾ ಅಧಿಕಾರಿ ಸಹ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇಬ್ಬರು ಪೊಲೀಸ್ ಅಧಿಕಾರಿಗಳ ನಡುವಿನ ಖಾಸಗಿ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸರ್ವೆ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತುಮಕೂರು ಜಿಲ್ಲೆಯ ಗುಬ್ಬಿ ಮೂಲದ ಶಿವಕುಮಾರ್ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ನೌಕರರ ಸಂಘದ ನಿರ್ದೇಶಕರಾಗಿದ್ದ ಶಿವಕುಮಾರ್ ಮೂಡಿಗೆರೆ ಬಸ್ ನಿಲ್ದಾಣದ ಬಳಿಯ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಶಿವಕುಮಾರ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ 'ಅನ್ನಭಾಗ್ಯ'ಕ್ಕೆ ಹಿನ್ನಡೆಯಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಅನುದಾನದ ಕೊರತೆಯಿಂದಾಗಿ ಸರ್ಕಾರದಿಂದ ಪ್ರತಿ ಕುಟುಂಬಕ್ಕೆ 5 ಕೆಜಿ ಅಕ್ಕಿ ಬದಲಿಗೆ ನೀಡಲಾಗುತ್ತಿದ್ದ 170 ರೂಪಾಯಿ ಹಣ ಕಳೆದ ಅಕ್ಟೋಬರ್ ತಿಂಗಳಿನಿಂದ ಫಲಾನುಭವಿಗಳಿಗೆ ಸಂದಾಯವಾಗಿಲ್ಲ. ಈ ಬಗ್ಗೆ ಬಿಪಿಎಲ್ ಫಲಾನುಭವಿಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ತಕ್ಷಣವೇ ಖಾತೆಗೆ ಹಣ ಹಾಕುವಂತೆ ಫಲಾನುಭವಿಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್, ಅಕ್ಟೋಬರ್ ತಿಂಗಳ ಪಾವತಿಯನ್ನು ಒಂದೆರಡು ದಿನಗಳಲ್ಲಿ ಮಾಡಲಾಗುತ್ತದೆ ಎಂದರು.
Advertisement