ಮೆಟ್ರೋ ಪ್ರಯಾಣ ದರ ಏರಿಕೆ: ಕೇಂದ್ರದ ಪಾತ್ರವಿಲ್ಲ ಎಂದ ಅಶ್ವಿನಿ ವೈಷ್ಣವ್; ಕಾನೂನನ್ನು ಓದಿಲ್ಲ ಎಂದ ರಾಮಲಿಂಗಾರೆಡ್ಡಿ

ಬೆಂಗಳೂರಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಆಹಾರ, ಸಾರ್ವಜನಿಕ ವಿತರಣೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಟೀಕಿಸಿದರು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
Updated on

ಬೆಂಗಳೂರು: ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರ ಏರಿಕೆ ಕುರಿತು ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದಕ್ಕೆ ಸಂಬಂಧಿಸಿದ ಕಾನೂನು ನಿಬಂಧನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ. ಹಾಗಾಗಿ, ಅವರ ಹೇಳಿಕೆಗಳು ಆಧಾರ ರಹಿತವಾಗಿವೆ ಮತ್ತು ಅದರ ಬಗ್ಗೆ ಚರ್ಚಿಸುವುದರಲ್ಲಿ ಅರ್ಥವಿಲ್ಲ’ ಎಂದರು.

ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಅವರು ಯಾವುದೇ ತಿಳುವಳಿಕೆಯಿಲ್ಲದೆ ಮಾತನಾಡಿದ್ದಾರೆ. ಸುಳ್ಳನ್ನು ಪುನರಾವರ್ತಿಸುತ್ತಿದ್ದಾರೆ. ಇದೆಲ್ಲವೂ ಪಕ್ಷದ ಪ್ರಚಾರ ತಂತ್ರದ ಭಾಗವಾಗಿದೆ. ಬೆಂಗಳೂರು ನಗರದ ಇಬ್ಬರು ಬಿಜೆಪಿ ಸಂಸದರು ಕೂಡ ಮೆಟ್ರೋ ಯೋಜನೆಯನ್ನು ತಂದ ವಿಚಾರವಾಗಿ ಸುಳ್ಳು ಹೇಳುತ್ತಿದ್ದಾರೆ. ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಇದನ್ನು ಪ್ರಾರಂಭಿಸಲಾಗಿದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದರು.

ಬೆಂಗಳೂರಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಆಹಾರ, ಸಾರ್ವಜನಿಕ ವಿತರಣೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ವಿರುದ್ಧ ಟೀಕಿಸಿದರು.

'ಮೆಟ್ರೋ ದರ ಏರಿಕೆಯ ಉದ್ದೇಶಕ್ಕಾಗಿ ಕಾನೂನು ಚೌಕಟ್ಟು ಇದೆ. ಮೆಟ್ರೋ ಕಾಯ್ದೆ 2002ರ ಸೆಕ್ಷನ್ 34ರ ಪ್ರಕಾರ, ಮೆಟ್ರೋ ಪ್ರಯಾಣ ದರ ಪರಿಷ್ಕರಣೆಗಳಿಗೆ ಔಪಚಾರಿಕ ಕಾರ್ಯವಿಧಾನಗಳ ಅಗತ್ಯವಿರುತ್ತದೆ. ಮೆಟ್ರೋ ಸೇವೆಗಳನ್ನು ಹೊಂದಿರುವ ಪ್ರತಿ ರಾಜ್ಯವು ಪ್ರಯಾಣ ದರ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತದೆ' ಎಂದು ಅವರು ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ನಮ್ಮ ಮೆಟ್ರೋ ದರ ಏರಿಕೆಗೆ ಶಿಫಾರಸು ಮಾಡಿದ್ದು ರಾಜ್ಯ ಸರ್ಕಾರ: ಸಂಸದ ಬೊಮ್ಮಾಯಿ

ಈ ಮನವಿಯನ್ನು ಆಧರಿಸಿ, ಕೇಂದ್ರ ಸರ್ಕಾರವು ಪ್ರಯಾಣ ದರ ಹೆಚ್ಚಳವನ್ನು ಪರಿಶೀಲಿಸಲು ಮತ್ತು ಶಿಫಾರಸು ಮಾಡಲು ಸಮಿತಿಯನ್ನು ರಚಿಸುತ್ತದೆ. ಬೆಂಗಳೂರು ಮೆಟ್ರೋ ದರ ಏರಿಕೆ ಕುರಿತಾಗಿಯೂ ರಾಜ್ಯ ಮನವಿ ಸಲ್ಲಿಸಿತು. ಈ ಪ್ರಕಾರ ಕೇಂದ್ರ ಸರ್ಕಾರವು 2024ರ ಸೆಪ್ಟೆಂಬರ್ 7ರಂದು ಸಮಿತಿ ರಚಿಸಿತು. ಈ ಸಮಿತಿಯಲ್ಲಿ ಮದ್ರಾಸ್ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ಆರ್. ತಾರಿಣಿ ಅಧ್ಯಕ್ಷರಾಗಿದ್ದಾರೆ. ಇನ್ನುಳಿದಂತೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ (ಭಾರತ ಸರ್ಕಾರ) ಹೆಚ್ಚುವರಿ ಕಾರ್ಯದರ್ಶಿ ಸತೀಂದರ್ ಪಾಲ್ ಸಿಂಗ್ ಭಾಸೆ ಮತ್ತು ನಿವೃತ್ತ ಐಎಎಸ್ ಅಧಿಕಾರಿ ರಮಣ ರೆಡ್ಡಿ ಸದಸ್ಯರಾಗಿದ್ದಾರೆ ಎಂದು ಅವರು ಹೇಳಿದರು.

ಪ್ರಯಾಣ ದರ ಪರಿಷ್ಕರಣೆ ಕುರಿತು ಸಮಿತಿಯು ತನ್ನ ಶಿಫಾರಸುಗಳನ್ನು ಸಲ್ಲಿಸಿದೆ. ಆದರೆ, ಮೆಟ್ರೊ ಕಾಯ್ದೆಯಡಿ ಈ ಸಮಿತಿ ರಾಜ್ಯ ಸರ್ಕಾರಕ್ಕೆ ವರದಿ ನೀಡುವುದಿಲ್ಲ. ಈ ವರದಿಯನ್ನು ಮೆಟ್ರೊ ಮಂಡಳಿ ಸಭೆಯಲ್ಲಿ ಮಂಡಿಸಲಾಗುತ್ತದೆ. ಮೆಟ್ರೋ ಮಂಡಳಿಯಲ್ಲಿ ರಾಜ್ಯ ಸರ್ಕಾರದ ಒಬ್ಬ ಪ್ರತಿನಿಧಿ ಮಾತ್ರ ಇರುತ್ತಾರೆ. ಪ್ರಯಾಣ ದರ ಏರಿಕೆಯ ಅಂತಿಮ ನಿರ್ಧಾರ ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯವರದ್ದಾಗಿರುತ್ತದೆ ಎಂದು ಹೇಳಿದರು.

'ಹೀಗಾಗಿ, ಮೆಟ್ರೋ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ದರ ಹೆಚ್ಚಳದ ಪ್ರಸ್ತಾವನೆಗಳನ್ನು ಸಲ್ಲಿಸುವುದಿಲ್ಲ ಮತ್ತು ಭಾರತದಾದ್ಯಂತ ಎಲ್ಲ ಮೆಟ್ರೋ-ಆಪರೇಟಿಂಗ್ ರಾಜ್ಯಗಳಲ್ಲಿ ಅದೇ ವಿಧಾನವನ್ನು ಅನುಸರಿಸಲಾಗುತ್ತದೆ. ಬೆಂಗಳೂರಿಗೆ ಮೆಟ್ರೋವನ್ನು ತಂದದ್ದು ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯ ನಾಯಕತ್ವ ಎಂದು ಹೇಳಿದ ರಾಮಲಿಂಗಾರೆಡ್ಡಿ, ಕೆಲವು ಬಿಜೆಪಿ ನಾಯಕರು ಸುಳ್ಳು ಕ್ರೆಡಿಟ್ ಪಡೆಯುತ್ತಿದ್ದಾರೆ' ಎಂದು ಆರೋಪಿಸಿದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ಮೆಟ್ರೋ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು ರಾಜ್ಯ ಸರ್ಕಾರ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

'ನಮ್ಮ ಮೆಟ್ರೋ, ನಮ್ಮ ಮೆಟ್ರೋ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದವರು, ಅದರ ಸಂಪೂರ್ಣ ಕ್ರೆಡಿಟ್ ಅನ್ನು ಕೇಂದ್ರ ಸರ್ಕಾರಕ್ಕೆ ನೀಡುತ್ತಿದ್ದವರೇ ಈಗ ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರಿಗೆ ನಾಚಿಕೆ ಆಗುವುದಿಲ್ಲವೇ?. ಕೇಂದ್ರವನ್ನು ಪ್ರಶ್ನಿಸುವ ಧೈರ್ಯ ಬಿಜೆಪಿ ನಾಯಕರಿಗೆ ಇಲ್ಲ. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ರಾಜ್ಯ ಅಥವಾ ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಾರೆಯೇ ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಕರ್ನಾಟಕದ ಬಿಜೆಪಿ ನಾಯಕರಿಗೆ ಪ್ರಧಾನಿಯನ್ನು ಪ್ರಶ್ನಿಸುವ ಧೈರ್ಯ ಇರಬೇಕು. ನಾವು ನೆಲ-ಜಲದ ಹಕ್ಕುಗಳಿಗಾಗಿ ಹೋರಾಡುತ್ತೇವೆ ಎನ್ನುತ್ತಾರೆ ಆದರೆ, ಕರ್ನಾಟಕದ ಜನರ ಪರವಾಗಿ ನಿಲ್ಲುವಲ್ಲಿ ವಿಫಲರಾಗಿದ್ದಾರೆ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.

ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು?

ಮೆಟ್ರೋ ಪ್ರಯಾಣ ದರ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಪ್ರಯಾಣ ದರ ಏರಿಕೆಗೆ ರಾಜ್ಯ ಸರ್ಕಾರವೇ ಹೊಣೆ. ಮೆಟ್ರೊಗೆ ಸಂಬಂಧಿಸಿದ ಎಲ್ಲ ಜವಾಬ್ದಾರಿಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ, ಮೆಟ್ರೋ ಪ್ರಯಾಣ ದರ ಪರಿಷ್ಕರಣೆ ಸಮಿತಿ ಇರುವುದು ಕರ್ನಾಟಕದಲ್ಲಿಯೇ ಹೊರತು ದೆಹಲಿಯಲ್ಲಿಲ್ಲ. ಈ ಸಂಗತಿಗಳನ್ನು ಗಮನಿಸಿದರೆ, ಪ್ರಯಾಣ ದರ ಏರಿಕೆಗೆ ಬಿಜೆಪಿಯನ್ನು ದೂಷಿಸುವುದು ಸರಿಯಲ್ಲ ಎಂದಿದ್ದರು.

ಚೆನ್ನೈ, ದೆಹಲಿ, ಹೈದರಾಬಾದ್ ಮತ್ತು ಮುಂಬೈ ಸೇರಿದಂತೆ ಇತರ ಪ್ರಮುಖ ನಗರಗಳಲ್ಲಿ ಇದೇ ರೀತಿಯ ನೀತಿಗಳು ಅನ್ವಯಿಸುತ್ತವೆ. ಮೆಟ್ರೋ ಯೋಜನೆಗಳು ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುತ್ತವೆ. ಮೆಟ್ರೋ ಸೇವೆಗಳಿಗೆ ಸಂಬಂಧಿಸಿದ ಎಲ್ಲ ನಿರ್ಧಾರಗಳನ್ನು ರಾಜ್ಯವೇ ತೆಗೆದುಕೊಳ್ಳುತ್ತದೆ. ಹೀಗಾಗಿ, ಮೆಟ್ರೋ ಸೇವೆಗಳಿಗೆ ಸಂಬಂಧಿಸಿದ ಎಲ್ಲ ಬೆಳವಣಿಗೆಗಳಿಗೆ ರಾಜ್ಯ ಸರ್ಕಾರವೇ ಜವಾಬ್ದಾರಿ. ಮೆಟ್ರೋ ಪ್ರಯಾಣ ದರ ಏರಿಕೆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ದೇಶನ ನೀಡಿಲ್ಲ' ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com