2025-26ನೇ ಸಾಲಿನ ಆಯವ್ಯಯವನ್ನು ಮಾರ್ಚ್ 7ರಂದು ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿದ್ದರಾಮಯ್ಯ ರೈತ ಸಂಘದ ಮುಖಂಡರ ಜೊತೆ 2025-26ನೇ ಸಾಲಿನ ಆಯವ್ಯಯ ಪೂರ್ವಭಾವಿ ಸಭೆ ನಡೆಸಿ, ರೈತ ಸಮುದಾಯದ ಕುಂದುಕೊರತೆ, ಬೇಡಿಕೆಗಳನ್ನು ಆಲಿಸಿದರು. ನಂತರ ಸುದ್ದಿಗಾರರಿಗೆ ಬಜೆಟ್ ಮಂಡನೆಯ ಬಗ್ಗೆ ಮಾಹಿತಿ ನೀಡಿದರು. ಮಾರ್ಚ್ 3ರಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುತ್ತದೆ. ಮಾರ್ಚ್ 7ರಂದು ಬಜೆಟ್ ಮಂಡಿಸುತ್ತೇನೆ. ಬಳಿಕ 3 ದಿನ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯಾಗುತ್ತದೆ ಎಂದರು. ಸಿದ್ದರಾಮಯ್ಯ ದಾಖಲೆಯ 16ನೇ ಬಾರಿಗೆ ಬಜೆಟ್ ಮಂಡಿಸಲಿದ್ದು ಈ ಸಾಲಿನ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿರಲಿದೆ.
ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಹಾಗೂ ಅಳಂದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಅವರನ್ನು ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅಲ್ಲದೆ ಬಿಆರ್ ಪಾಟೀಲ್ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಸಚಿವ ಸಂಪುಟ ದರ್ಜೆಯ ಸ್ಥಾನಮಾನ ಮತ್ತು ಎಲ್ಲಾ ಸೌಲಭ್ಯಗಳೊಂದಿಗೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಫೆಬ್ರವರಿ 1ರಂದು ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ಬಿಆರ್ ಪಾಟೀಲ್ ರಾಜೀನಾಮೆ ನೀಡಿದ್ದರು.
ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ಮೆಂಟ್ ವೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದ್ದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಮೃತರನ್ನು ಚೇತನ್, ರೂಪಾಲಿ, ಕುಶಾಲ್ ಮತ್ತು ಪ್ರಿಯಂವದಾ ಎಂದು ಗುರುತಿಸಲಾಗಿದೆ. ಚೇತನ್ ತಮ್ಮ ಕುಟುಂಬ ಸದಸ್ಯರಿಗೆ ವಿಷವುಣಿಸಿ ಕೊಂದು ನಂತರ ತಾವು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮೈಸೂರು ಪೊಲೀಸ್ ಆಯುಕ್ತೆ ಸೀಮಾ ಲಟ್ಕರ್, ವಿದ್ಯಾರಣ್ಯಪುರದ ಸಂಕಲ್ಪ ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ವರದಿ ನಂತರ ಸಾವಿಗೆ ನಿಖರ ಕಾರಣ ತಿಳಿಯುತ್ತದೆ. ಪ್ರಕರಣ ಬಗ್ಗೆ ಪೊಲೀಸರು ತನಿಖೆಕೈಗೊಂಡಿದ್ದಾರೆ ಎಂದರು.
13 ವರ್ಷದ ಬಾಲಕನೊಬ್ಬ ಅಸಲಿ ಬಂದೂಕು ಹಿಡಿದು ಆಟವಾಡುವಾಗ ಆಕಸ್ಮಿಕವಾಗಿ ಗುಂಡು ತಗುಲಿ ಮೂರು ವರ್ಷದ ಮಗು ಸಾವನ್ನಪ್ಪಿ, ಆತನ ತಾಯಿಗೆ ಗಾಯಗಳಾಗಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ನಡೆದಿದೆ. ನಾಗಮಂಗಲದ ದೊಂದೇಮಾದಿಹಳ್ಳಿಯಲ್ಲಿ ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿ ಈ ಘಟನೆ ನಡೆದಿದ್ದು ಮೃತ ಮಗುವನ್ನು 3 ವರ್ಷದ ಅಭಿಷೇಕ್ ಎಂದು ಗುರುತಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ಶಶಾಂಕ್ ಮತ್ತು ಲಿಪಿಕಾ ಕೋಳಿ ಫಾರಂನಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಕೋಳಿಫಾರಂನಲ್ಲಿ ಭದ್ರತೆಗಾಗಿ ಗುಂಡು ತುಂಬಿದ ಒಂದು ಅಸಲಿ ಬಂದೂಕು ಇಡಲಾಗಿತ್ತು. ಸದ್ಯ ಪೊಲೀಸರು ಬಂದೂಕು ವಶಕ್ಕೆ ಪಡೆದಿದ್ದು ತನಿಖೆ ಆರಂಭಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಕಳೆದ ಮೂರ್ನಾಲ್ಕು ತಿಂಗಳಿನಿಂದ ಫಲಾನುಭವಿಗಳಿಗೆ ಹೋಗಿಲ್ಲ ಎಂದು ವಿಪಕ್ಷಗಳು ಟೀಕೆ ಮಾಡುತ್ತಿದ್ದು, ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆ ಹಣ ಹಾಕುವುದು ಸ್ವಲ್ಪ ತಡವಾಗಿದೆ. ಎರಡು ಯೋಜನೆಗಳ ಹಣವನ್ನು ಶೀಘ್ರದಲ್ಲೇ ಖಾತೆಗಳಿಗೆ ಹಾಕುತ್ತೇವೆ ಎಂದು ಆಶ್ವಾಸನೆ ನೀಡಿದರು. ಮತ್ತೊಂದೆಡೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಪ್ರತಿ ಕಿಲೋಗೆ ಕನಿಷ್ಠ 22.50 ರೂ.ಗೆ ಅಕ್ಕಿ ನೀಡಲು ಸಿದ್ಧವಿದೆ. ಆದರೆ ರಾಜ್ಯ ಸರ್ಕಾರ ನಮ್ಮಿಂದ ಅಕ್ಕಿ ಖರೀದಿಸುತ್ತಿಲ್ಲ. ಕೇಂದ್ರದಿಂದ ಅಕ್ಕಿ ಖರೀದಿಸಿದರೆ ವಾರ್ಷಿಕವಾಗಿ 2,280 ಕೋಟಿ ರೂ. ಉಳಿತಾಯವಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
Advertisement