ಹೆಚ್ಚುವರಿ ತಂಬಾಕು ಮಾರಾಟಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ: ಧನ್ಯವಾದ ತಿಳಿಸಿದ ನಿಖಿಲ್ ಕುಮಾರಸ್ವಾಮಿ, ವಿಜಯೇಂದ್ರ

ಎಫ್‌ಸಿವಿ ತಂಬಾಕನ್ನು ಕರ್ನಾಟಕದಲ್ಲಿ 53,325 ಹೆಕ್ಟೇರ್‌ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. 40,487 ನೋಂದಾಯಿತ ರೈತರು ಮತ್ತು 12,838 ಪರವಾನಗಿ ಪಡೆಯದ ಬೆಳೆಗಾರರು ಇದ್ದಾರೆ.
Nikhil Kumaraswamy
ನಿಖಿಲ್ ಕುಮಾರಸ್ವಾಮಿ
Updated on

ಬೆಂಗಳೂರು: ರಾಜ್ಯದ ಸಂಕಷ್ಟದಲ್ಲಿರುವ ತಂಬಾಕು ಬೆಳೆಗಾರರನ್ನು ಬೆಂಬಲಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೆ ಜೆಡಿಎಸ್ ಕರ್ನಾಟಕ ಘಟಕ ಮಂಗಳವಾರ ಧನ್ಯವಾದ ಸಲ್ಲಿಸಿದೆ.

ಹುಣಸೂರು, ಪಿರಿಯಾಪಟ್ಟಣ, ಹೆಚ್‌ಡಿ ಕೋಟೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆಯಲಾಗಿರುವ ಪರವಾನಗಿ ರಹಿತ ತಂಬಾಕು ಬೆಳೆಗಾರರಿಗೆ ತಮ್ಮ ಉತ್ಪನ್ನಗಳ ಮಾರಾಟಕ್ಕೆ ಅನುಮತಿ ನೀಡಿದ್ದಕ್ಕಾಗಿ ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸಿದ್ದಾರೆ.

ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದ ಅವರು, '2024ರ ಡಿಸೆಂಬರ್ 2ರಂದು ದೆಹಲಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ನೇತೃತ್ವದ ನಿಯೋಗವು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು. ನಂತರ ಡಿ. 21ರಂದು ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಿರ್ಣಾಯಕ ಸಭೆ ನಡೆಸಲಾಯಿತು' ಎಂದು ತಿಳಿಸಿದ್ದಾರೆ.

ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ ನಿಖಿಲ್ ಕುಮಾರಸ್ವಾಮಿ ಅವರ ನಿಯೋಗದಲ್ಲಿ ಮೈಸೂರು-ಕೊಡಗು ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಸಚಿವ ಸಾರಾ ಮಹೇಶ್, ಹುಣಸೂರು ಶಾಸಕ ಜಿಟಿ ಹರೀಶ್ ಗೌಡ ಮತ್ತು ತಂಬಾಕು ಬೆಳೆಗಾರರು ಇದ್ದರು.

ಕಳೆದ ವರ್ಷ ಮೇ, ಜುಲೈ ತಿಂಗಳಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ತಂಬಾಕು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರು. ಇದರಿಂದಾಗಿ ರಾಜ್ಯದಲ್ಲಿ ಬೆಳೆಯಲಾಗುವ ಎಫ್‌ಸಿವಿ (flue-cured Virginia-FCV) ತಂಬಾಕು ಬೆಳೆ ಇಳುವರಿಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡಿತ್ತು ಮತ್ತು ತಂಬಾಕು ಎಲೆಗಳ ಗುಣಮಟ್ಟ ಕುಸಿತಕ್ಕೆ ಕಾರಣವಾಯಿತು. ಇದರಿಂದಾಗಿ ತಂಬಾಕು ಬೆಳೆಗಾರರು ಭಾರಿ ನಷ್ಟಕ್ಕೆ ತುತ್ತಾಗಿದ್ದರು. ಕೇಂದ್ರ ಸರ್ಕಾರ ಇದೀಗ ನೆರವಿಗೆ ಧಾವಿಸಿರುವುದರಿಂದ ಸಾವಿರಾರು ತಂಬಾಕು ಬೆಳೆಗಾರರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಪ್ರಧಾನಿ ಮೋದಿ ಅವರ ಸರ್ಕಾರವು ಹಲವಾರು ಐತಿಹಾಸಿಕ ರೈತ ಸ್ನೇಹಿ ನಿರ್ಧಾರಗಳನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದಾಗಿ ತಂಬಾಕು ಮಂಡಳಿಯ ಅಧೀನದಲ್ಲಿರುವ ಹರಾಜು ಕೇಂದ್ರಗಳು ಹುಚ್ಚುವರಿ ಶುಲ್ಕವಿಲ್ಲದೆ ಹೆಚ್ಚುವರಿ ಮತ್ತು ಅನಧಿಕೃತ ತಂಬಾಕನ್ನು ಮಾರಾಟ ಮಾಡುವುದಕ್ಕೆ ಅವಕಾಶ ನೀಡುತ್ತವೆ. ಈ ನಿರ್ಧಾರವು ವಿಶೇಷವಾಗಿ 12,838 ಪರವಾನಗಿ ಪಡೆಯದ ತಂಬಾಕು ರೈತರಿಗೆ ಪ್ರಯೋಜನ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

ಎಫ್‌ಸಿವಿ ತಂಬಾಕನ್ನು ಕರ್ನಾಟಕದಲ್ಲಿ 53,325 ಹೆಕ್ಟೇರ್‌ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ. 40,487 ನೋಂದಾಯಿತ ರೈತರು ಮತ್ತು 12,838 ಪರವಾನಗಿ ಪಡೆಯದ ಬೆಳೆಗಾರರು ಇದ್ದಾರೆ.

ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ, '2024ರ ಮೇ, ಜೂನ್ ಮತ್ತು ಜುಲೈನಲ್ಲಿ ಭಾರಿ ಮಳೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಎಫ್‌ಸಿವಿ ತಂಬಾಕು ಬೆಳೆಗಾರರ ರಕ್ಷಣೆಗೆ ಬಂದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಜಿ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಜಿ ಅವರಿಗೆ ವಿಶೇಷ ಧನ್ಯವಾದಗಳು' ಎಂದಿದ್ದಾರೆ.

ಕರ್ನಾಟಕದ ಎಫ್‌ಸಿವಿ ತಂಬಾಕು ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ಮನಗಂಡು ಕೇಂದ್ರ ಸರ್ಕಾರವು ನೋಂದಾಯಿತ ಬೆಳೆಗಾರರಿಂದ ಹೆಚ್ಚುವರಿ ತಂಬಾಕು ಮತ್ತು ಅನಧಿಕೃತ ತಂಬಾಕನ್ನು ಹರಾಜು ವೇದಿಕೆಗಳಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಮಾರಾಟ ಮಾಡಲು ಅನುಮತಿ ನೀಡಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com