ಕಲಬುರಗಿ: ಕಾರ್ಮಿಕನ ಮೃತದೇಹವನ್ನು ಎಳೆದೊಯ್ದ ಸಿಮೆಂಟ್ ಕಂಪನಿ ಸಿಬ್ಬಂದಿ! ವಿಡಿಯೋ ವೈರಲ್
ಕಲಬುರಗಿ: ಕೆಲಸ ಮಾಡುತ್ತಿದ್ದಾಗ ಹಠಾತ್ ಹೃದಯಾಘಾತ ಉಂಟಾಗಿ ಮೃತಪಟ್ಟ ಬಿಹಾರದ ವಲಸೆ ಕಾರ್ಮಿಕನ ಮೃತದೇಹವನ್ನು ಪ್ರಾಣಿ ತರಹ ಎಳೆದೊಯ್ದಿರುವ ಆಘಾತಕಾರಿ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬಿಹಾರದ ವಲಸೆ ಕಾರ್ಮಿಕ ವರ್ಷದ ಚಂದನ್ ಸಿಂಗ್ (35) ಮೃತಪಟ್ಟ ಕಾರ್ಮಿಕ. ಮಂಗಳವಾರ ಜಿಲ್ಲೆಯ ಸೇಡಂ ಪಟ್ಟಣದ ಸಮೀಪದ ಕೋಡ್ಲಾ ಗ್ರಾಮದ ಶ್ರೀ ಸಿಮೆಂಟ್ ಕಂಪನಿಯ ಆವರಣದಲ್ಲಿ ಕೆಲಸ ಮಾಡುತ್ತಿದ್ದಾಗ ದಿಢೀರ್ ಹೃದಯಾಘಾತವಾಗಿದ್ದು, ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ .
ಹೃದಯಾಘಾತಕ್ಕೆ ಒಳಗಾಗುವ ಮೊದಲು ಚಂದನ್ ಸಿಂಗ್ ಅವರಿಗೆ ಲೋ ಬಿಪಿ ಇತ್ತು ಎನ್ನಲಾಗಿದೆ. ಆದರೆ, ಸಾವಿಗೆ ನಿಖರ ಕಾರಣವನ್ನು ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ವೀಡಿಯೊದಲ್ಲಿ ಕಾರ್ಖಾನೆ ಆವರಣದೊಳಗೆ ಚಂದನ್ ಸಿಂಗ್ ಅವರ ಮೃತದೇಹವನ್ನು ದೇಹವನ್ನು ನಾಲ್ಕು ವ್ಯಕ್ತಿಗಳು ಹಿಡಿದುಕೊಂಡು ದರ ದರನೇ ಎಳೆದೊಯ್ದಿದ್ದಾರೆ. ಅಮಾನವೀಯ ಕೃತ್ಯದ ವಿರುದ್ಧ ಧ್ವನಿ ಎತ್ತಲಾಗದ ಅಸಹಾಯಕ ಸ್ಥಿತಿಯಲ್ಲಿ ಕೂಲಿಕಾರರು ಹಿಂಬಾಲಿಸಿದ್ದಾರೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಾರ್ಮಿಕನ ಮೃತ ದೇಹಕ್ಕೆ ಕನಿಷ್ಠ ಗೌರವ ತೋರದ ಕಾರ್ಖಾನೆ ಆಡಳಿತ ಮಂಡಳಿಯ ವರ್ತನೆಗೆ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ