ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಬೆಂಗಳೂರಿನ ಟ್ರಾಫಿಕ್ ಅನ್ನು ಆ ದೇವರೂ ಬಂದರೂ ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ನಗರದ ಟ್ರಾಫಿಕ್ ಸಮಸ್ಯೆಗಳನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಡಿಕೆ ಶಿವಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಮಸ್ಯೆಗಳನ್ನು ನಿಭಾಯಿಸುವ ಸಮರ್ಥ ವ್ಯಕ್ತಿಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಆ ಭಗವಂತ ಬಹುಶಃ ನಮ್ಮ ಮಂತ್ರಿಗಳನ್ನು ಕೈಬಿಟ್ಟಿರಬಹುದು. ಇದು ಆಡಳಿತ ವೈಫಲ್ಯ ಒಪ್ಪಿಕೊಳ್ಳುವುದಾಗಿದೆ. ದಯವಿಟ್ಟು ಬೆಂಗಳೂರು ಅಭಿವೃದ್ಧಿ ಮೇಲೆ ಗಮನಹರಿಸಿ ಮತ್ತು ನಮ್ಮ ಜೀವನವನ್ನು ಸುಧಾರಿಸಿ ಎಂದು ಡಿಕೆ ಶಿವಕುಮಾರ್‌ಗೆ ಉದ್ಯಮಿ ಮೋಹನ್‌ದಾಸ್ ಪೈ ತಿರುಗೇಟು ನೀಡಿದ್ದಾರೆ.
ಪ್ರಯಾಗ್‌ರಾಜ್ ಕುಂಭಮೇಳಕ್ಕೆ ತೆರಳಿದ್ದ ಬೀದರ್ ಮೂಲದ ಒಂದೇ ಕುಟುಂಬದ ಐವರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಕಾಶಿ ಬಳಿ ನಡೆದಿದೆ. ಲಾರಿ ಮತ್ತು ಕ್ರೂಸರ್ ನಡುವೆ ಇಂದು ಬೆಳಗ್ಗೆ ಮಿರಜಾಪೂರ್ ಜಿಲ್ಲೆಯ ರೂಪಾಪೂರ ಬಳಿ ಅಪಘಾತ ಸಂಭವಿಸಿದೆ. ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು 7 ಮಂದಿ ಗಾಯಗೊಂಡಿದ್ದಾರೆ. ಬೀದರ್ ನಗರದ ಲಾಡಗೇರಿ ಬಡಾವಣೆಯ ನಿವಾಸಿಗಳಾದ ಸುನೀತಾ, ಸಂತೋಷ್, ನೀಲಮ್ಮ, ಸೇರಿದಂತೆ ಐವರು ಮಂದಿ ಸಾವನ್ನಪ್ಪಿದ್ದಾರೆ. ಒಂದೇ ಗಾಡಿಯಲ್ಲಿ ಒಟ್ಟು 14 ಜನ ಕುಂಭ ಮೇಳಕ್ಕೆ ತೆರಳಿದ್ದರು. ಪುಣ್ಯ ಸ್ನಾನ ಮಾಡಿದ ಬಳಿಕ ಪ್ರಯಾಗ್‌ರಾಜ್‌ನಿಂದ ಕಾಶಿ ಕಡೆಗೆ ಕ್ರೂಸರ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿತ್ತು.
ಕಳೆದ ರಾತ್ರಿ ನಡುರಸ್ತೆಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬೈಕ್ ವೀಲಿಂಗ್ ಮಾಡುತ್ತಿದ್ದವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು ರೌಡಿ ಪಟ್ಟಿಗೆ ಸೇರಿಸಲಾಗಿದೆ. ಬಂಧಿತರನ್ನು ನಯೀಂ ಪಾಶಾ, ಅರಾಫತ್, ಸಾಹಿಲ್ ಹುಸೈನ್, ನಜ್ಮತ್, ಅದ್ನಾನ್ ಪಾಶಾ, ನಿಯಾಮತುಲ್ಲಾ ಸೇರಿದಂತೆ ಒಟ್ಟು 11 ಆರೋಪಿಗಳನ್ನ ಬಂಧಿಸಲಾಗಿದೆ. ಮಾತ್ರವಲ್ಲದೇ ಈ ಕೃತ್ಯಕ್ಕೆ ಬಳಸಿದ್ದ 7 ದ್ವಿಚಕ್ರ ವಾಹನಗಳನ್ನ ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ. ಫೆಬ್ರವರಿ 13ರಂದು ಶಬ್-ಇ-ಬಾರಾತ್ ಹಬ್ಬ ಆಚರಣೆ ವೇಳೆ ಕೆ.ಜಿ ಹಳ್ಳಿಯ ನೂರ್ ಮಸೀದಿಯಿಂದ ಹೊಸಕೋಟೆ ಟೋಲ್‌ವರೆಗೂ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಹೋಗಿದ್ದರು. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಬೆಂಗಳೂರಿನ ಕೋರಮಂಗಲದ ಹೋಟೆಲ್ ಒಂದರಲ್ಲಿ 33 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಮೂಲದ ಮೂವರು ಆರೋಪಿಗಳಾದ ಅಜಿತ್, ವಿಶ್ವಾಸ್, ಶಿವು ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಜ್ಯೋತಿ ನಿವಾಸ್ ಕಾಲೇಜು ಜಂಕ್ಷನ್‌ನಲ್ಲಿ ಆಕೆಯನ್ನು ಮಾತನಾಡಿಸಿ ಆರೋಪಿಗಳು ಹೋಟೆಲ್‌ನಲ್ಲಿ ಊಟಕ್ಕೆ ಆಹ್ವಾನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಊಟದ ನಂತರ, ಅವರು ಖಾಸಗಿ ಹೋಟೆಲ್‌ನ ಟೆರೇಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಬಗ್ಗೆ ಯಾರಿಗೂ ಹೇಳದಂತೆ ಬೆದರಿಕೆ ಹಾಕಿ ಶುಕ್ರವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಆಕೆಯನ್ನು ಬಿಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ವಿಶ್ವ ಮಾತೃಭಾಷೆ ದಿನವಾದ ಇಂದು ಮರಾಠಿ ಭಾಷೆಯಲ್ಲಿ ಮಾತನಾಡು ಎಂದು ಧಮ್ಕಿ ಹಾಕಿದ ಮರಾಠಿ ಭಾಷಿಕರು ಬಸ್ ನಿರ್ವಾಹಕ ಮತ್ತು ಚಾಲಕನ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಬೆಳಗಾವಿ-ಸುಳೇಬಾವಿ ಮಾರ್ಗಮಧ್ಯೆ ಸಂಚರಿಸುವ ಬಸ್‌ನಲ್ಲಿ ಕಂಡಕ್ಟರ್ ಮಹದೇವಗೆ ಟಿಕೆಟ್ ಕೊಡುವಂತೆ ಯುವತಿ ಮರಾಠಿಯಲ್ಲಿ ಕೇಳಿದ್ದಾಳೆ. ಯುವತಿ ಜೊತೆ ಯುವಕ ಸಹ ಪ್ರಯಾಣಿಸುತ್ತಿದ್ದನು. ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಹೇಳಿ ಎಂದು ಮಹದೇವ ಹೇಳಿದ್ದಾರೆ. ಇಷ್ಟಕ್ಕೆ ಜನರನ್ನು ಕರೆಸಿ ಚಲಿಸುತ್ತಿರುವ ಬಸ್ ನಿಲ್ಲಿಸಿ ಕಂಡಕ್ಟರ್ಗೆ ಹಲ್ಲೆ ಮಾಡಲಾಗಿದೆ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement