
ಬೆಂಗಳೂರು: ಮಹಾರಾಷ್ಟ್ರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ದಾಳಿ ನಡೆಸಿದ ಘಟನೆಗಳ ಕುರಿತು ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಈ ಕುರಿತು ಮಹಾರಾಷ್ಟ್ರದ ತಮ್ಮ ಸಹೋದ್ಯೋಗಿಯೊಂದಿಗೆ ಮಾತನಾಡಲು ಸಾರಿಗೆ ಇಲಾಖೆ ಕಾರ್ಯದರ್ಶಿಗೆ ಸೂಚಿಸಿರುವುದಾಗಿ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮರಾಠಿ ಬರುವುದಿಲ್ಲ ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದ ಕಾರಣಕ್ಕೆ ಬೆಳಗಾವಿಯಲ್ಲಿ ವಾಯುವ್ಯ ಸಾರಿಗೆ ಸಂಸ್ಥೆ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆಯಿಂದಾಗಿ ಕನ್ನಡ ಪರ ಸಂಘಟನೆಗಳು ಚಿತ್ರದುರ್ಗದಲ್ಲಿ ಮಹಾರಾಷ್ಟ್ರದ ಸಾರಿಗೆ ಸಂಸ್ಥೆಯ ನಾಲ್ಕೈದು ಬಸ್‌ಗಳಿಗೆ ಕಪ್ಪು ಬಣ್ಣ ಬಳಿದಿದ್ದಾರೆ' ಎಂದರು.
'ನಮ್ಮ ಇಲಾಖೆಯ ಕಾರ್ಯದರ್ಶಿಗೆ ಮಹಾರಾಷ್ಟ್ರದಲ್ಲಿರುವ ಅವರ ಸಹವರ್ತಿಯೊಂದಿಗೆ ಮಾತನಾಡಲು ಸೂಚಿಸಲಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುತ್ತಿದ್ದು, ಇಂತಹ ಘಟನೆಗಳಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಇಲಾಖೆಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ' ಎಂದು ಹೇಳಿದರು.
'ಆರಂಭದಲ್ಲಿ ಬೆಳಗಾವಿಯಲ್ಲಿ ಕಂಡಕ್ಟರ್ ಮತ್ತು ಇಬ್ಬರು ಪ್ರಯಾಣಿಕರ ನಡುವೆ ಜಗಳ ನಡೆದಿತ್ತು. ಪ್ರಯಾಣಿಕರಿಗೆ ಕನ್ನಡ ಬರುತ್ತಿರಲಿಲ್ಲ, ನಮ್ಮ ಕಂಡಕ್ಟರ್‌ಗೆ ಮರಾಠಿ ಬರುತ್ತಿರಲಿಲ್ಲ. ಪುರುಷ ಪ್ರಯಾಣಿಕರಲ್ಲಿ ಒಬ್ಬರು ಮಹಿಳೆಯರಿಗೆ ನೀಡಲಾಗುವ ಉಚಿತ ಟಿಕೆಟ್ ಬಳಸಿ ಪ್ರಯಾಣಿಸುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಫೋನ್ ಕರೆಗಳನ್ನು ಮಾಡಿದ್ದಾರೆ ಮತ್ತು ಜನರನ್ನು ಒಟ್ಟುಗೂಡಿಸಿದ್ದಾರೆ. ನಂತರ ಅವರು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಬಸ್‌ನಲ್ಲಿ 90 ಪ್ರಯಾಣಿಕರಿದ್ದರು' ಎಂದು ತಿಳಿಸಿದ್ದಾರೆ.
'ಈ ಸಂಬಂಧ ದೂರು ದಾಖಲಿಸಲಾಗಿದೆ ಮತ್ತು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಇದಾದ ಒಂದು ದಿನದ ನಂತರ, ಕಂಡಕ್ಟರ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲಿಸಲಾಗಿದೆ' ಎಂದರು.
ಕಳೆದ ಶುಕ್ರವಾರ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡದಲ್ಲಿ ಮಾತನಾಡುವಂತೆ ಕೇಳಿದ್ದಕ್ಕೆ ಜನರ ಗುಂಪೊಂದು ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ನಂತರ ಉದ್ವಿಗ್ನತೆ ಉಂಟಾಗಿತ್ತು. ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕನ್ನಡಪರ ಸಂಘಟನೆಗಳು ಬೆಳಗಾವಿ-ಬಾಗಲಕೋಟೆ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಘಟನೆ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕದಲ್ಲಿ ವಾಸಿಸುವವರು ಕನ್ನಡ ಕಲಿಯಬೇಕು. ಜನರು ತಮ್ಮ ಮಾತೃಭಾಷೆಯಾದ ಮರಾಠಿಯನ್ನು ಮಾತನಾಡಬಹುದಾದರೂ, ಕರ್ನಾಟಕದಲ್ಲಿ ಕನ್ನಡವನ್ನೂ ಮಾತನಾಡಬೇಕು. ಇಂತಹ ಘಟನೆಗಳನ್ನು ಎಲ್ಲ ಪಕ್ಷಗಳು ಖಂಡಿಸಬೇಕು' ಎಂದರು.
Advertisement