ಭೂ ಹಗರಣ: ಸ್ಯಾಮ್ ಪಿತ್ರೋಡಾ ವಿರುದ್ಧ ಕರ್ನಾಟಕ ಲೋಕಾಯುಕ್ತ, EDಗೆ BJP ದೂರು

ಬಿಜೆಪಿಯ ಹಿರಿಯ ನಾಯಕ ಎನ್.ಆರ್. ರಮೇಶ್ ಸೋಮವಾರ ಪೂರಕ ದಾಖಲೆಗಳೊಂದಿಗೆ ಸ್ಯಾಮ್ ಪಿತ್ರೋಡಾ ಸೇರಿದಂತೆ 6 ಜನರ ವಿರುದ್ಧ ಲೋಕಾಯುಕ್ತ ಮತ್ತು ಇಡಿಗೆ ದೂರು ನೀಡಿದ್ದಾರೆ.
ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ
ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ
Updated on

ಬೆಂಗಳೂರು: 150 ಕೋಟಿ ರೂ. ಮೌಲ್ಯದ ಭೂಮಿಯನ್ನು ಕಾನೂನುಬಾಹಿರವಾಗಿ ಸ್ವಾಧೀನದಲ್ಲಿರಿಸಿಕೊಂಡಿರುವ ಆರೋಪಿಸಿ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಆಪ್ತ ಸ್ಯಾಮ್ ಪಿತ್ರೋಡಾ ವಿರುದ್ಧ ಕರ್ನಾಟಕ ಲೋಕಾಯುಕ್ತ ಮತ್ತು ಬೆಂಗಳೂರಿನ ಜಾರಿ ನಿರ್ದೇಶನಾಲಯ(ED)ಕ್ಕೆ ದೂರು ನೀಡಲಾಗಿದೆ.

ಬಿಜೆಪಿಯ ಹಿರಿಯ ನಾಯಕ ಮತ್ತು ಕಾರ್ಯಕರ್ತ ಎನ್.ಆರ್. ರಮೇಶ್ ಸೋಮವಾರ ಪೂರಕ ದಾಖಲೆಗಳೊಂದಿಗೆ ಸ್ಯಾಮ್ ಪಿತ್ರೋಡಾ ಸೇರಿದಂತೆ 6 ಜನರ ವಿರುದ್ಧ ಲೋಕಾಯುಕ್ತ ಮತ್ತು ಇಡಿಗೆ ದೂರು ನೀಡಿದ್ದಾರೆ.

"ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಸ್ಯಾಮ್ ಪಿತ್ರೋಡಾ, ಕರ್ನಾಟಕದ ಅರಣ್ಯ ಇಲಾಖೆಯ 150 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಒಳಗೊಂಡ ಅಕ್ರಮ ಭೂ ಹಗರಣದಲ್ಲಿ ಭಾಗಿಯಾಗಿದ್ದಾರೆ" ಎಂದು ರಮೇಶ್ ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ
ಚೀನಾ ಭಾರತದ ಶತ್ರುವಲ್ಲ: ಪಕ್ಷಕ್ಕೆ ಮುಜುಗರ ತಂದ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಹೇಳಿಕೆ

ಸ್ಯಾಮ್ ಪಿತ್ರೋಡಾ, ಕರ್ನಾಟಕ ರಾಜ್ಯ ಅರಣ್ಯ ಮತ್ತು ಪರಿಸರ ಇಲಾಖೆಯ ಮಾಜಿ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್​, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಾದ ಆರ್.ಕೆ. ಸಿಂಗ್​ ಮತ್ತು ಸಂಜಯ್ ಮೋಹನ್, ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ಬೆಂಗಳೂರು ನಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎನ್.ರವೀಂದ್ರ ಕುಮಾರ್ ಮತ್ತು ಎಸ್.ಎಸ್.ರವಿಶಂಕರ್ ವಿರುದ್ಧ ಬಿಜೆಪಿ ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್​ ಅವರು ದಾಖಲೆಗಳ ಸಹಿತ ದೂರು ಸಲ್ಲಿಸಿದ್ದಾರೆ.

ವಂಚನೆ, ಭ್ರಷ್ಟಾಚಾರ, ಅಕ್ರಮ ಸರ್ಕಾರಿ ಭೂಮಿ ಸ್ವಾಧೀನ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಸತ್ಯನಾರಾಯಣ ಗಂಗಾರಾಮ್​​ ಪಿತ್ರೋಡಾ (ಸ್ಯಾಮ್ ಪಿತ್ರೋಡಾ) ಅವರು 23/10/1991ರಂದು ಮುಂಬೈನ ರಿಜಿಸ್ಟ್ರಾರ್ ಆಫ್ ಕೋ–ಆಪರೇಟಿವ್ ಸೊಸೈಟೀಸ್​ ಕಚೇರಿಯಲ್ಲಿ "Foundation for Revitalisation of Local Health Traditions" (FRLHT) ಎಂಬ ಸಂಸ್ಥೆ ನೋಂದಣಿ ಮಾಡಿದ್ದಾರೆ. ನಂತರ ಸ್ಯಾಮ್ ಪಿತ್ರೋಡಾ ಅವರ ಲಿಖಿತ ರೂಪದ ಮನವಿಯಂತೆ 2010ರಲ್ಲಿ FRLHT ಸಂಸ್ಥೆಯ ನೋಂದಣಿಯನ್ನು ರದ್ದುಗೊಳಿಸಲಾಗಿದೆ. 2008ರಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ "Foundation for Revitalisation of Local Health Traditions" (FRLHT) ಎಂಬ ಅದೇ ಹೆಸರಿನ Trust Deedನ್ನು ದಿನಾಂಕ 05/09/2008ರಂದು ನೋಂದಣಿ ಮಾಡಿಸಲಾಗಿದೆ.

ಗಿಡಮೂಲಿಕೆ ಔಷಧಿ ಸಸಿಗಳ ಸಂರಕ್ಷಣೆ ಮತ್ತು ಸಂಶೋಧನೆ ಕಾರ್ಯಕ್ಕೆಂದು ಸ್ಯಾಮ್ ಪಿತ್ರೋಡಾರವರು 1996ರಲ್ಲಿ FRLHT ಸಂಸ್ಥೆಗೆ ಮೀಸಲು ಅರಣ್ಯ ಪ್ರದೇಶವನ್ನು ಗುತ್ತಿಗೆಗೆ ನೀಡುವಂತೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಅದರಂತೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಸ್ಯಾಮ್ ಪಿತ್ರೋಡಾರವರ ಅಧ್ಯಕ್ಷತೆಯ FRLHT, Mumbai ಸಂಸ್ಥೆಗೆ ಬೆಂಗಳೂರಿನ ಯಲಹಂಕ ಬಳಿಯ ಜಾರಕಬಂಡೆ ಕಾವಲ್‌ನ ‘ಬಿ’ ಬ್ಲಾಕ್‌ನಲ್ಲಿ 5 ಹೆಕ್ಟೇರ್ (12.35 ಎಕರೆ) ವಿಸ್ತೀರ್ಣದ ಮೀಸಲು ಅರಣ್ಯ ಪ್ರದೇಶವನ್ನು 5 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿತ್ತು.

ಇದಕ್ಕೆ ಕೇಂದ್ರದ ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆ (Ministry of Forest, Ecology & Environment, Govt: of India) ಯೂ ಸಹ ಅನುಮೋದನೆ ನೀಡಿತ್ತು. FRLHT ಸಂಸ್ಥೆಗೆ ನೀಡಿದ್ದ 5 ವರ್ಷಗಳ ಗುತ್ತಿಗೆ ಅವಧಿ ಮುಕ್ತಾಯದ ನಂತರ (2001ರಲ್ಲಿ) ಮುಂದಿನ 10 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಮುಂದುವರೆಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಆದೇಶಿಸಿತ್ತು. 2001ರ ಆದೇಶದಂತೆ ದಿನಾಂಕ 2/12/2011ಕ್ಕೆ ಸ್ಯಾಮ್ ಪಿತ್ರೋಡಾ ಅವರ FRLHT ಸಂಸ್ಥೆಗೆ ನೀಡಿದ್ದ ಗುತ್ತಿಗೆ ಅವಧಿ ಮುಕ್ತಾಯಗೊಂಡಿದೆ.

ಇದಾದ ನಂತರ ಅರಣ್ಯ ಇಲಾಖೆಯು FRLHT ಸಂಸ್ಥೆಯ ಗುತ್ತಿಗೆ ಅವಧಿಯನ್ನು ವಿಸ್ತರಿಸಿಲ್ಲ. ಆದರೂ ಸಹ 150 ಕೋಟಿ ರೂಗಳಿಗೂ ಹೆಚ್ಚು ಮೌಲ್ಯದ 12.35 ಎಕರೆ ವಿಸ್ತೀರ್ಣದದ ಸರ್ಕಾರಿ ಸ್ವತ್ತನ್ನು ರಾಜ್ಯ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿಲ್ಲ ಎಂದು ಎನ್.ಆರ್.ರಮೇಶ್ ದೂರಿನಲ್ಲಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com