
ನವದೆಹಲಿ: ಚೀನಾ ಭಾರತದ ಶತ್ರುವಲ್ಲ ಎಂದು ಹೇಳುವ ಮೂಲಕ ಚೀನಾ ಭಾರತದ ಶತ್ರುವಲ್ಲಎಂಬ ಹೇಳಿಕೆ ನೀಡುವ ಮೂಲಕ ಸಾಗರೋತ್ತರ ಭಾರತೀಯ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಅವರು ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. ಜೊತೆಗೆ ಪಕ್ಷಕ್ಕೆ ಮುಜುಗರ ತಂದಿದ್ದಾರೆ.
ಖಾಸಗಿ ಸುದ್ದಿಸಂಸ್ಥೆ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ್ದ ಪಿತ್ರೋಡಾ, ಭಾರತ ಮತ್ತು ಚೀನಾ ಪರಸ್ಪರ ವಿರೋಧಿಗಳಲ್ಲ. ಚೀನಾ ಭಾರತದ ಶತ್ರು ರಾಷ್ಟ್ರವಲ್ಲ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಉಭಯ ದೇಶಗಳ ನಡುವಿನ ಗಡಿ ಘರ್ಷಣೆಯನ್ನೇ ಬಂಡವಾಳ ಮಾಡಿಕೊಂಡು ಚೀನಾ ಬಗ್ಗೆ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದೆ, ಚೀನಾದ ಬಗ್ಗೆ ಭಾರತ ಹೊಂದಿರುವ ಮನಸ್ಥಿತಿ ಬದಲಾಗಬೇಕಿದೆ ಎಂದಿದ್ದಾರೆ.
ಭಾರತಕ್ಕೆ ಚೀನಾದಿಂದ ಬೆದರಿಕೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಇದು ಅಮೆರಿಕವು ತನ್ನ ಶತ್ರು ರಾಷ್ಟ್ರಗಳನ್ನು ವ್ಯಾಖ್ಯಾನಿಸುವ ಪ್ರವೃತ್ತಿಯ ಒಂದು ಅನುಕರಣೆಯಾಗಿದೆ. ಒಗ್ಗಟ್ಟಾಗಿ ಎಲ್ಲಾ ರಾಷ್ಟ್ರಗಳು ಮುಂದುವರಿಯಬೇಕೇ ಹೊರತು ಕಾದಾಡಬಾರದು ಎಂದು ಹೇಳಿದ್ದಾರೆ.
ಸ್ಯಾಮ್ ಪಿತ್ರೋಡಾ ವಿವಾದಾತ್ಮಕ ಹೇಳಿಕೆಗೆ ಕೆಂಡಾಮಂಡಲವಾಗಿರುವ ಬಿಜೆಪಿ, "ರಾಹುಲ್ ಮತ್ತು ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಚೀನಾದ ಏಜೆಂಟ್ ಎಂಬ ತನ್ನ ಆರೋಪ ಇದೀಗ ನಿಜವಾಗಿದೆ.." ಎಂದು ಕಿಡಿಕಾರಿದೆ.
ಪಿತ್ರೋಡಾ ಹೇಳಿಕೆ ಟೀಕಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ವಕ್ತಾರ ತುಹಿನ್ ಸಿನ್ಹಾ, 40 ಸಾವಿರ ಚದರ ಕಿ.ಮೀ ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಬಿಟ್ಟುಕೊಟ್ಟವರಿಗೆ ಚೀನಾದಿಂದ ಯಾವುದೇ ಬೆದರಿಕೆ ಕಾಣುವುದಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಯವರ ಆಪ್ತ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆ ಕಾಂಗ್ರೆಸ್ ಪಕ್ಷವು ಭಾರತದ ಹಿತಾಸಕ್ತಿಗಳಿಗಿಂತ ಚೀನಾದ ಹಿತಾಸಕ್ತಿಗೆ ಆದ್ಯತೆ ನೀಡುತ್ತ ಎಂಬುದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ಯಾವಾಗಲೂ ಚೀನಾ ಮತ್ತು ಪಾಕಿಸ್ತಾನದ ಹಿತಾಸಕ್ತಿಗಳಿಗೆ ಪೂರಕವಾಗಿ ಮಾತನಾಡುತ್ತದೆ ಎಂದು ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಕಿಡಿಕಾರಿದ್ದಾರೆ.
Advertisement