
ಕಲಬುರಗಿ: ಮಹಾಶಿವರಾತ್ರಿಯ ದಿನದಂದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಪ್ರಸಿದ್ಧ ಲಾಡ್ಲೆ ಮಶಾಕ್ ದರ್ಗಾದಲ್ಲಿನ ರಾಘವಚೈತನ್ಯ ಶಿವಲಿಂಗದ ಪೂಜೆಗೆ ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ಅನುಮತಿ ನೀಡಿದೆ.
ನಾಳೆ ಮಹಾ ಶಿವರಾತ್ರಿಯಂದು ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಅನುಮತಿ ನೀಡುವಂತೆ ಕೋರಿ ಹಿಂದೂ ಸಂಘಟನೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ, ನಾಳೆ ಶಿವಲಿಂಗದ ಪೂಜೆಗೆ ಅನುಮತಿ ನೀಡಿದೆ.
ದರ್ಗಾದೊಳಗೆ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಅನುಮತಿ ನಿರಾಕರಿಸಿದ್ದರು.
ಜಿಲ್ಲಾಧಿಕಾರಿ ಅನುಮತಿ ನಿರಾಕರಣೆ ಹಿನ್ನಲೆಯಲ್ಲಿ ಹಿಂದೂ ಸಂಘಟನೆ ಸದಸ್ಯರು ಹೈಕೋಟ್೯ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಾಳೆ ಮಧ್ಯಾಹ್ನ 2 ರಿಂದ ಸಂಜೆ 6ರ ವರೆಗೆ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಗ್ರೀನ್ ಸಿಗ್ನಲ್ ನೀಡಿ ಆದೇಶ ಹೊರಡಿಸಿದೆ. ಆದರೆ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೊರತು ಪಡಿಸಿ 15 ಜನರಿಗೆ ಪೂಜೆಗೆ ಅವಕಾಶ ನೀಡಿದೆ.
ದರ್ಗಾದ ಇತಿಹಾಸ
ಆಳಂದ ಪಟ್ಟಣದಲ್ಲಿ ಈ ಪ್ರಸಿದ್ದ ದರ್ಗಾ ಇದೆ. ಖ್ಯಾತ ಸೂಫಿ ಸಂತ ಲಾಡ್ಲೆ ಮಶಾಕ್ ಅವರ ದರ್ಗಾ ಇದಾಗಿದೆ. 14ನೇ ಶತಮಾನದಲ್ಲಿ ತತ್ವ ವಿಚಾರಗಳಿಂದ ಲಾಡ್ಲೆ ಮಶಾಕ್ ಸುಪ್ರಸಿದ್ದಿಯನ್ನು ಹೊಂದಿದ್ದರು. ಇದೇ ದರ್ಗಾದ ಆವರಣದಲ್ಲಿ 15ನೇ ಶತಮಾನದಲ್ಲಿ ಆಗಿಹೋಗಿರುವ ಶಿವಾಜಿ ಮಹಾರಾಜರ ಗುರು, ಸಂತ ಸಮರ್ಥ ರಾಮದಾಸರ ರಾಘವ ಚೈತನ್ಯರ ಸಮಾಧಿಯಿ ಕೂಡ ಇದೆ. ಅದರ ಮೇಲೆ ಒಂದು ಶಿವಲಿಂಗ ಇದೆ. ಹೀಗಾಗಿ ಆ ಶಿವಲಿಂಗಕ್ಕೆ ಶ್ರೀ ರಾಘವ ಚೈತನ್ಯ ಶಿವಲಿಂಗ ಅಂತ ಕರೆಯಲಾಗುತ್ತದೆ.
Advertisement