
ಬೆಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿಗೆ ಲೋಕಾಯುಕ್ತ ಪೊಲೀಸರು ಕ್ಲೀನ್ ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ಭೂ ಮಂಜೂರಾತಿಯಲ್ಲಿನ ಅಕ್ರಮಗಳನ್ನು ತನಿಖೆ ತಳ್ಳಿಹಾಕಿಲ್ಲ ಎಂದು ಬುಧವಾರ ಹೇಳಿದ್ದಾರೆ.
‘ಮುಡಾ ಹಗರಣ ಹಾಗೂ ಲೋಕಾಯುಕ್ತ ತನಿಖೆಯಲ್ಲಿ ಅಕ್ರಮ ಹಂಚಿಕೆ ಆಗಿಲ್ಲ ಎಂದು ಹೇಳುತ್ತಿಲ್ಲ. ಆದರೆ, ಅಕ್ರಮ ಎಸಗಿರುವುದು ಅಧಿಕಾರಿಗಳ ತಪ್ಪು ಎಂದು ಲೋಕಾಯುಕ್ತರು ತೀರ್ಮಾನಿಸಿದ್ದಾರೆ. ಅಕ್ರಮ ಭೂ ಮಂಜೂರಾತಿಯಿಂದ ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಲಾಭ ಮಾಡಿಕೊಂಡಿದೆ’ ಎಂದು ಆರೋಪಿಸಿದರು.
'ಸಿದ್ದರಾಮಯ್ಯ ಮತ್ತು ಅವರ ಕುಟುಂಬ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿರುವುದು ದೃಢಪಟ್ಟಿದೆ. ಹಾಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ಭೂ ಮಂಜೂರಾತಿಯಿಂದ ಲಾಭ ಪಡೆದಿದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ' ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಭೂ ಹಗರಣಗಳಲ್ಲಿ ಭಾಗಿಯಾಗಿದೆ. ಇದು ಎಲ್ಲರಿಗೂ ತಿಳಿದಿರುವ ಸತ್ಯ. ಕಾಂಗ್ರೆಸ್ ಭೂಕಬಳಿಕೆ ದಂಧೆಯಲ್ಲಿ ತೊಡಗಿರುವುದು ಈಗ ಗೊತ್ತಾಗಿದೆ. ಇದು ಅಧಿಕಾರಿಯೊಬ್ಬರ ತಪ್ಪು ಎಂದು ಲೋಕಾಯುಕ್ತ ತೀರ್ಮಾನಿಸಿದೆ. ಈ ಅಧಿಕಾರಿ ಸೇವೆಯನ್ನು ತೊರೆದು ಕಾಂಗ್ರೆಸ್ ಪಕ್ಷ ಸೇರಿರುವ ಸಂಸದ. ಈ ರೀತಿಯ ಅಕ್ರಮ ಭೂಕಬಳಿಕೆಯಲ್ಲಿ ಕಾಂಗ್ರೆಸ್ ಆಳವಾಗಿ ತೊಡಗಿಸಿಕೊಂಡಿದೆ. ಹೀಗಾಗಿ, ಇದನ್ನು ಯಾವುದಾದರೂ ಕೇಂದ್ರದ ತನಿಖಾ ದಳ ತನಿಖೆ ಮಾಡಬೇಕಾಗಿದೆ ಎಂದು ಹೇಳಿದರು.
ಫೆಬ್ರುವರಿ 20 ರಂದು ಕರ್ನಾಟಕ ಲೋಕಾಯುಕ್ತ ಎಸ್ಪಿ ಉದೇಶ್ ಅವರು ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ 8,000 ಪುಟಗಳ ಮಧ್ಯಂತರ ಬಿ ರಿಪೋರ್ಟ್ ಸಲ್ಲಿಸಿದ ನಂತರ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿ, 'ಲೋಕಾಯುಕ್ತ ಸ್ವತಂತ್ರ ತನಿಖಾ ಸಂಸ್ಥೆ. ಸಿಎಂಗೆ ಕ್ಲೀನ್ ಚಿಟ್ ನೀಡಿದ್ದರೆ ಸ್ವಾಗತಿಸುತ್ತೇನೆ. ಯಾವುದೇ ಹಗರಣ ನಡೆದಿಲ್ಲ, ಕುಟುಂಬದವರ ಕೈವಾಡವಿಲ್ಲ ಎಂದು ಸಿಎಂ ಈಗಾಗಲೇ ಹೇಳಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಬಿಜೆಪಿಯನ್ನು ತೃಪ್ತಿಪಡಿಸಲೆಂದು ನಾವು ಇಲ್ಲಿಲ್ಲ. ಇದೇ ಲೋಕಾಯುಕ್ತರು ಹಲವು ಪ್ರಕರಣಗಳಲ್ಲಿ ಬಿಜೆಪಿಗೆ ಕ್ಲೀನ್ ಚಿಟ್ ನೀಡಿದ್ದರು' ಎಂದಿದ್ದಾರೆ.
Advertisement