News Headlines 01-01-25 | New year 2025ಕ್ಕೆ ಅದ್ಧೂರಿ ಸ್ವಾಗತ; ಬೆಂಗಳೂರಿನಲ್ಲಿ ಅಹಿತಕರ ಘಟನೆ ನಡೆದಿಲ್ಲ; ಪ್ರಿಯಾಂಕ್ ಖರ್ಗೆ ವಿರುದ್ಧ ಸಾಕ್ಷ್ಯವಿಲ್ಲ; ಸಿಟಿ ರವಿ ವಿರುದ್ಧ FIR!

News Headlines 01-01-25 | New year 2025ಕ್ಕೆ ಅದ್ಧೂರಿ ಸ್ವಾಗತ; ಬೆಂಗಳೂರಿನಲ್ಲಿ ಅಹಿತಕರ ಘಟನೆ ನಡೆದಿಲ್ಲ; ಪ್ರಿಯಾಂಕ್ ಖರ್ಗೆ ವಿರುದ್ಧ ಸಾಕ್ಷ್ಯವಿಲ್ಲ; ಸಿಟಿ ರವಿ ವಿರುದ್ಧ FIR!

1. New year 2025 ಅದ್ಧೂರಿ ಸ್ವಾಗತ; ಬೆಂಗಳೂರಿನಲ್ಲಿ ಅಹಿತಕರ ಘಟನೆ ನಡೆದಿಲ್ಲ

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಜನರು ಹುರುಪಿನಿಂದ ಹೊಸವರ್ಷವನ್ನು ಬರ ಮಾಡಿಕೊಂಡಿದ್ದಾರೆ. ನಗರಗಳ ಗಲ್ಲಿ ಗಲ್ಲಿಯಲ್ಲೂ ಪಾರ್ಟಿಯ ಗುಂಗು ರಂಗೇರಿತ್ತು. ಇಡೀ ದೇಶ 2024ಕ್ಕೆ ಗುಡ್‌ಬೈ ಹೇಳಿ 2025 ಅನ್ನ ಭರ್ಜರಿಯಾಗಿ ಸ್ವಾಗತ ಮಾಡಿತು. ಬೆಂಗಳೂರಿನ ಪ್ರಮುಖ ರಸ್ತೆ ಎಂ.ಜಿ ರೋಡ್ ಬ್ರಿಗೇಡ್ ರೋಡ್‌ ನಲ್ಲಿ ಯುವ ಸಮೂಹ ಬೀಡುಬಿಟ್ಟು 12 ಗಂಟೆಯಾಗುತ್ತಿದ್ದಂತೆ ಕುಣಿದು ಕುಪ್ಪಳಿಸುತ್ತಾ ಹೊಸ ವರ್ಷವನ್ನು ಸ್ವಾಗತಿಸಿದರು. ಇನ್ನು ಹೊಸವರ್ಷ ಆಚರಣೆ ಕುರಿತಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು, ಇದೇ ಮೊದಲ ಬಾರಿಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸುರಕ್ಷಿತವಾಗಿ ಹೊಸ ವರ್ಷಾಚರಣೆ ಸಂಭ್ರಮ ನಡೆದಿದ್ದು ಸಾರ್ವಜನಿಕರಿಗೆ ಮತ್ತು ಪೊಲೀಸ್ ಇಲಾಖೆಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಹೊಸ ವರ್ಷದ ದಿನ ಅಬಕಾರಿ ಇಲಾಖೆಗೆ ಭರ್ಜರಿ ಕಲೆಕ್ಷನ್ ಆಗಿದೆ. ನಿನ್ನೆ ಒಂದೇ ದಿನದಲ್ಲಿ KSBCLನಿಂದ 308 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.

2. ಪ್ರಿಯಾಂಕ್ ಖರ್ಗೆ ವಿರುದ್ಧ ಸಾಕ್ಷ್ಯವಿಲ್ಲ

ಗುತ್ತಿಗೆದಾರ ಸಚಿನ್ ಮಾನಪ್ಪ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಅದರ ವರದಿಗಾಗಿ ಕಾಯುತ್ತಿದ್ದೇವೆ. ಡೆತ್ ನೋಟ್ ನಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿಲ್ಲ. ಅದರಲ್ಲಿ ಅವರ ಪಾತ್ರವಿಲ್ಲ. ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಆದರೂ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವಂತೆ ಪ್ರತಿಪಕ್ಷಗಳು ಪಟ್ಟುಹಿಡಿದಿವೆ ಎಂದರು. ಇದೇ ವೇಳೆ ಸಚಿವ ಸಂಪುಟ ಪುನಾರಚನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಈ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ ಎಂದರು.

3. ಸಿಟಿ ರವಿ ವಿರುದ್ಧ FIR

ಬೀದರ್ ಗುತ್ತಿಗೆದಾರ ಸಚಿನ್ ಮಾನಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಟಿ-ಬಿಟಿ ಸಚಿವ ಪ್ರಿಯಾಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮುಖಂಡರು ನಿನ್ನೆ ಪ್ರತಿಭಟನೆ ನಡೆಸಿದ್ದರು. ಬೆಂಗಳೂರಿನ ರೇಸ್‌ ಕೋರ್ಸ್ ರಸ್ತೆಯಲ್ಲಿ ಪೋಸ್ಟರ್ ಅಭಿಯಾನವನ್ನು ಬಿಜೆಪಿ ನಾಯಕರು ನಡೆಸಿದ್ದರು. ಆದರೆ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ, ಎಂಎಲ್ಸಿಗಳಾದ ಸಿ.ಟಿ.ರವಿ, ಎನ್.ರವಿಕುಮಾರ್ ಸೇರಿದಂತೆ 15 ಬಿಜೆಪಿ ನಾಯಕರ ವಿರುದ್ಧ ಹೈಗ್ರೌಂಡ್ಸ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇದೇ ವೇಳೆ ಪೊಲೀಸರ ವಿರುದ್ಧ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮೇಲೆ ನಡೆದ ದೌರ್ಜನ್ಯ ಮತ್ತು ಹತ್ಯೆ ಯತ್ನದ ಬಗ್ಗೆ 2024ರ ಡಿಸೆಂಬರ್ 19ರಂದು ನಾನು ಸಲ್ಲಿಸಿದ್ದ ದೂರಿನ ಮೇಲೆ ಬೆಳಗಾವಿ ಪೊಲೀಸರು ಇನ್ನೂ ಎಫ್‌ಐಆರ್ ದಾಖಲಿಸಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಬದಲಾಗಿದೆ, ಅಧಿಕಾರದಲ್ಲಿರುವ ಕಾಂಗ್ರೆಸ್ ಮುಖಂಡರಿಗೆ ಒಂದು ಕಾನೂನು , ಕಾಂಗ್ರೆಸ್ಸೇತರ ಪಕ್ಷಗಳ ಮುಖಂಡರಿಗೆ ಮತ್ತೊಂದು ಕಾನೂನು ಇದೆ ಎಂದು ವಾಗ್ದಾಳಿ ನಡೆಸಿದರು.

4. ಕೌಟುಂಬಿಕ ಕಲಹ: ಇಂಜಿನಿಯರ್ ಪ್ರಮೋದ್ ಆತ್ಮಹತ್ಯೆ

ಕೌಟುಂಬಿಕ ಕಲಹದಿಂದ ಬೇಸತ್ತು ಇಂಜಿನಿಯರ್ ಪ್ರಮೋದ್ ಎಂಬುವರು ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಪತ್ನಿ ಹಾಗೂ ಭಾಮೈದನ ಕಿರುಕುಳದಿಂದ ಬೇಸತ್ತು ಪ್ರಮೋದ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಮೋದ್ ನಾಪತ್ತೆಯಾಗಿದ್ದಾರೆ ಎಂದು ಪೋಷಕರು ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಹೇಮಾವತಿ ನದಿಯ ಸೇತುವೆ ಬಳಿ ಪ್ರಮೋದ್ ಬೈಕ್ ಪತ್ತೆಯಾಗಿತ್ತು. ಹೀಗಾಗಿ ಹೇಮಾವತಿ ನದಿಯಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಹುಡುಕಾಟ ನಡೆಸಿದ್ದು, ಇಂದು ಬೆಳಗ್ಗೆ ಪ್ರಮೋದ್ ಶವ ಪತ್ತೆಯಾಗಿದೆ.

5. ಹೊಸವರ್ಷದ ದಿನ ಪ್ರತ್ಯೇಕ ಅಪಘಾತ: ನಾಲ್ವರು ಸಾವು

ರಾಜ್ಯದಲ್ಲಿ ಹೊಸವರ್ಷ ದಿನವೇ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಹೊಸ ವರ್ಷಾಚರಣೆಯ ಸಂಭ್ರಮ ಮುಗಿಸಿ ಹಿಂತಿರುಗುವಾಗ ಚಾಮರಾಜನಗರದ ಗುಂಡ್ಲುಪೇಟೆಯ ಕೊಡಸೋಗೆ ಬಳಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಮಾಗಡಿ ತಾಲೂಕಿನ ಹೊಸಪಾಳ್ಯದ ಜನತಾ ಕಾಲೋನಿ ಬಳಿ ಬೆಳಗಿನ ಜಾವ 3 ಗಂಟೆಗೆ ಸುಮಾರಿಗೆ ಕಾರು ಪಲ್ಟಿಯಾಗಿ ಚೋಳನಾಯಕನಹಳ್ಳಿಯ ಮಂಜು ಮತ್ತು ಕಿರಣ್ ಎಂಬುವವರು ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com