
ಶಿವಮೊಗ್ಗ: ಹೊಸ ವರ್ಷಾಚರಣೆಯಂದು ಬಿಜೆಪಿ ಎಂಎಲ್‌ಸಿ ಡಾ.ಧನಂಜಯ್ ಸರ್ಜಿ ಅವರ ಹೆಸರಿನಲ್ಲಿ ಶಂಕಿತ ವಿಷಪೂರಿತ ಸಿಹಿತಿಂಡಿಗಳ ಬಾಕ್ಸ್‌ಗಳನ್ನು ಮೂವರಿಗೆ ಕಳುಹಿಸಿದ ದುಷ್ಕರ್ಮಿಗಳ ವಿರುದ್ಧ ಸರ್ಜಿ ಅವರ ಆಪ್ತ ಕಾರ್ಯದರ್ಶಿ ಪೊಲೀಸರಿಗೆ ದೂರು ನೀಡಿದ್ದಾರೆ.
ಸಿಹಿತಿಂಡಿಗಳ ಬಾಕ್ಸ್ ಸ್ವೀಕರಿಸಿದ ಮೂವರಲ್ಲಿ ನ್ಯಾಷನಲ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಎಸ್ ಎನ್ ನಾಗರಾಜ್ ಸಹ ಒಬ್ಬರಾಗಿದ್ದಾರೆ.
ದೂರಿನ ಪ್ರಕಾರ, ಜನವರಿ 1 ರಂದು, ಅನಾಮಧೇಯ ವ್ಯಕ್ತಿಗಳು, ಡಾ. ಸರ್ಜಿ ಅವರ ಹೆಸರನ್ನು ಬಳಸಿಕೊಂಡು, DTDC ಕೊರಿಯರ್ ಮೂಲಕ ಹೊಸ ವರ್ಷದ ಶುಭಾಶಯ ಪತ್ರದ ಜೊತೆಗೆ ಸಿಹಿತಿಂಡಿಗಳ ಬಾಕ್ಸ್ ಅನ್ನು ಕಳುಹಿಸಿದ್ದಾರೆ. ಬಾಕ್ಸ್ ಸ್ವೀಕರಿಸಿದ ನಾಗರಾಜ್ ಅವರು ಕೆಲವು ಸಿಹಿತಿಂಡಿಗಳನ್ನು ಸೇವಿಸಿದ್ದಾರೆ ಮತ್ತು ಸಿಹಿ ತಿಂಗಳು ತೀವ್ರ ಕಹಿಯಾಗಿರುವುದನ್ನು ಗಮನಿಸಿದ್ದಾರೆ.
ನಂತರ ನಾಗರಾಜ್ ಅವರು ಡಾ ಸರ್ಜಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಡಾಕ್ಟರ್ ಸರ್ಜಿ ಅವರು ಯಾವುದೇ ಸಿಹಿತಿಂಡಿಗಳನ್ನು ಕಳುಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇದು ಅವರ ಹೆಸರಿನಲ್ಲಿ ಕಳುಹಿಸಲಾದ ಸಿಹಿತಿಂಡಿಗಳಾಗಿದ್ದು, ವಿಷಕಾರಿ ಪದಾರ್ಥ ಕಲಬೆರಕೆ ಮಾಡಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿದೆ.
ಸಿಹಿತಿಂಡಿ ಮತ್ತು ಅನಾಮಧೇಯ ಪತ್ರ ಕಳುಹಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸರ್ಜಿ ಅವರ ಆಪ್ತ ಕಾರ್ಯದರ್ಶಿ ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 123 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚಿನ ತನಿಖೆಗಾಗಿ ಪೊಲೀಸರು ಸಿಹಿತಿಂಡಿಗಳ ಬಾಕ್ಸ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಇದೇ ರೀತಿಯ ಪೆಟ್ಟಿಗೆಗಳನ್ನು ಅರವಿಂದ್ ಮತ್ತು ಪವಿತ್ರಾ ಎಂಬ ಇಬ್ಬರು ವೈದ್ಯರಿಗೆ ಕಳುಹಿಸಲಾಗಿದೆ. ಭದ್ರಾವತಿಯಿಂದ ಕೊರಿಯರ್ ಕಳುಹಿಸಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
Advertisement