ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆಯ ಸಾರಾಯಿಪಾಳ್ಯದಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಗೋವಿಂದಪುರ ನಿವಾಸಿಗಳಾದ ನಾಜಿಯಾ ಸುಲ್ತಾನ್, ನಾಜಿಯಾ ಇರ್ಫಾನ್ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಸಹೋದರಿಯರು, ಎಡಬದಿಯಿಂದ ಬಿಬಿಎಂಪಿ ಕಸದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿದ್ದಾರೆ. ಈ ವೇಳೆ ಲಾರಿ ಡಿಕ್ಕಿ ಹೊಡೆದಿದ್ದು, ಸವಾರರ ಮೇಲೆ ಹರಿದು ಹೋಗಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹೆಣ್ಣೂರು ಸಂಚಾರಿ ಪೊಲೀಸರು ಕಸದ ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರಿಯಾಂಕ್ ಖರ್ಗೆ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದಾಗ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ, ಉಮೇಶ್ ಜಾಧವ್, ಎನ್.ಮಹೇಶ್ ಮತ್ತಿತರರನ್ನು ಪೊಲೀಸ್ ವಶಕ್ಕೆ ಪಡೆದರು. ಈ ಮಧ್ಯೆ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಪ್ರತಿಪಕ್ಷಗಳ ಬೇಡಿಕೆ ಮತ್ತು ಒತ್ತಡದ ತಂತ್ರಕ್ಕೆ ನಾನಾಗಲೀ ಅಥವಾ ಸರಕಾರವಾಗಲೀ ಮಣಿಯುವುದಿಲ್ಲ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧ ಹಲವು ಪ್ರಕರಣಗಳಿವೆ ಎಂದು ಹೇಳಿದ್ದಾರೆ.
ಇಡಿ ಅಧಿಕಾರಿಗಳು ಎಂದು ನಂಬಿಸಿ ಉದ್ಯಮಿಯ ಮನೆಯಲ್ಲಿ ದಾಳಿ ನಡೆಸುವ ಸೋಗಿನಲ್ಲಿ 30 ಲಕ್ಷ ರೂ. ಲೂಟಿ ಮಾಡಿದ ಘಟನೆ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ನಡೆದಿದೆ. ಹಲವು ವರ್ಷಗಳಿಂದ ಸಿಂಗಾರಿ ಬೀಡಿ ಸಂಸ್ಥೆ ನಡೆಸುತ್ತಿರುವ ಸುಲೈಮಾನ್ ಹಾಜಿ ಎಂಬುವವರ ಮನೆಗೆ ತಡರಾತ್ರಿ ಆಗಮಿಸಿದ್ದ ತಮಿಳುನಾಡು ಮೂಲದ ತಂಡ, ನಾವು ಇಡಿ ಅಧಿಕಾರಿಗಳು ಎಂದು ನಂಬಿಸಿ ಎರಡು ಗಂಟೆಗಳವರೆಗೆ ತನಿಖೆ ನಡೆಸಿದೆ. ಮನೆಯಲ್ಲಿದ್ದ ಸುಮಾರು 30 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ವಿಜಯಪುರದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದ್ದು, ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 16.84 ಕೋಟಿ ರೂಪಾಯಿ ನಷ್ಟವಾಗಿರುವುದು ಲೋಕಾಯುಕ್ತ ತನಿಖೆಯಿಂದ ಬಹಿರಂಗವಾಗಿದೆ. 2024ರ ಡಿಸೆಂಬರ್ 26 ರಂದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ತನಿಖೆ ಕೈಗೊಂಡಿದ್ದರು. ಡಿ.30ರಿಂದ ಐದು ದಿನಗಳ ಕಾಲ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಆಗಿನ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ, ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ ಸಾತರ್ಲೆ, ನಿವೃತ್ತ ಜಿಲ್ಲಾ ವ್ಯವಸ್ಥಾಪಕ ಎಸ್.ಎಸ್.ಮಾನಗಿರಿ ಸೇರಿದಂತೆ ಎಂಟು ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ ನಡೆಸಿದ್ದರು. ಆರೋಪಿತ ಅಧಿಕಾರಿಗಳು ಜಮೀನು ಮಂಜೂರಾತಿ ನಿಯಮ ಉಲ್ಲಂಘಿಸಿ, ನಿಗಮದಿಂದ ನಿವೇಶನ ಪಡೆದಿದ್ದರೂ ಆಯಾ ಸಮುದಾಯದ ಮಹಿಳೆಯರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬೀದರ್ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡುತ್ತಿರುವಾಗಲೆ ದಾವಣಗೆರೆಯ ಗುತ್ತಿಗೆದಾರರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು ಬಾಕಿ ಹಣ ಬಿಡುಗಡೆ ಮಾಡಿ ಇಲ್ಲವೇ, ದಯಾಮರಣ ಕರುಣಿಸಿ ಎಂದು ಮನವಿ ಮಾಡಿದ್ದಾರೆ. ಹರಿಹರದ ವಾರ್ಡ್ 29 ರ ಖಬರಸ್ಥಾನ (ಸಮಾಧಿ ಸ್ಥಳ) ದಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ಹರಿಹರದ ಗುತ್ತಿಗೆದಾರ ಮೊಹಮ್ಮದ್ ಮಜರ್ ಅವರು ಶೌಚಾಲಯ ನಿರ್ಮಿಸಿದ್ದು, ಕಾಮಗಾರಿ ಹಣ ಪಡೆಯಲು ವರ್ಷದಿಂದ ಕಚೇರಿಯಿಂದ ಕಚೇರಿಗೆ ಓಡಾಡುತ್ತಿದ್ದಾರೆ. ಹರಿಹರ ನಗರ ಪುರಸಭೆಯ ಅಧಿಕಾರಿಗಳು ಹಾರಿಕೆ ಉತ್ತರ ನೀಡಿ, ತಪ್ಪಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೇಸತ್ತಿರುವ ಗುತ್ತಿಗೆದಾರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
Advertisement