
ಬೆಂಗಳೂರು: ಮೈಸೂರಿನ ಇನ್ಫೋಸಿಸ್ ಆವರಣದಲ್ಲಿ ಕಾಣಿಸಿಕೊಂಡಿದೆ ಎನ್ನಲಾದ ಚಿರತೆ ಸೆರೆ ಕಾರ್ಯಾಚರಣೆ ಮೂರನೇ ದಿನವೂ ಮುಂದುವರೆದಿದೆ. ಕಳೆದ ಮೂರು ದಿನಗಳಿಂದ ಈ ಕಾರ್ಯಾಚರಣೆ ನಡೆಯುತ್ತಿದ್ದು, ಚಿರತೆಯ ಚಲನವಲನದ ಬಗ್ಗೆ ಈವರೆಗೆ ಸುಳಿವು ಕಂಡುಬಂದಿಲ್ಲ.
ಇನ್ನೂ ಮುಂದಿನ ದಿನಗಳಲ್ಲಿ ಸೆರೆ ಸಿಕ್ಕ ಚಿರತೆಗಳನ್ನು ಇಡಲು ಜಾಗದ ಕೊರತೆ ಎದುರಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನು ಪರಿಹರಿಸಲು, ಮುಂಬರುವ ದಿನಗಳಲ್ಲಿ ಲೇಔಟ್‌ಗಳು, ವಾಣಿಜ್ಯ ಮತ್ತು ವಸತಿ ಜಾಗಗಳಿಗೆ ಪ್ಲಾನ್ ಮಂಜೂರು ಮಾಡುವಾಗ ಅರಣ್ಯ ಇಲಾಖೆ ನಗರಾಭಿವೃದ್ಧಿ ಇಲಾಖೆಗಳು ಮತ್ತು ಮಹಾನಗರ ಪಾಲಿಕೆಗಳ ಜೊತೆಗೂಡಿ ಚರ್ಚೆ ನಡೆಸಬೇಕೆಂದು ತಿಳಿಸಿದೆ.
ನಾವು ಚಿರತೆಗಳನ್ನು ಸೆರೆಹಿಡಿಯುತ್ತಿದ್ದೇವೆ, ಆದರೆ ಅವುಗಳಿಗೆ ವಾಸ ಸ್ಥಾನ ಕಲ್ಪಿಸುವಲ್ಲಿ ಆಸಕ್ತಿ ತೋರುತ್ತಿಲ್ಲ. ಮುಂದಿನ 2-3 ವರ್ಷಗಳಲ್ಲಿ ಸೆರೆ ಹಿಡಿಯುವ ಚಿರತೆಗಳಿಗ ಸ್ಥಳಾವಕಾಶವಿರುವುದಿಲ್ಲ. ಇದಲ್ಲದೆ, ಮನುಷ್ಯರು ಮತ್ತು ಪ್ರಾಣಿಗಳಿಗೆ ಸ್ಥಳಾವಕಾಶವು ಕಳವಳದ ವಿಷಯವಾಗುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಹಿರಿಯ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
ಅರಣ್ಯ ಇಲಾಖೆ ದಾಖಲೆಗಳ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ಕಬ್ಬಿನ ಗದ್ದೆಯೊಂದರಿಂದಲೇ 16 ಚಿರತೆ ಮರಿಗಳನ್ನು ರೈತರು ಒಪ್ಪಿಸಿದ್ದಾರೆ. ಇಷ್ಟೇ ಅಲ್ಲ, ಪ್ರತಿ ತಿಂಗಳು ಪ್ರತಿ ಜಿಲ್ಲೆಯಿಂದ ಕನಿಷ್ಠ ಮೂರು ಚಿರತೆಗಳನ್ನು ರಕ್ಷಿಸಲಾಗುತ್ತದೆ.
ಬನ್ನೇರುಘಟ್ಟ ಚಿರತೆ ರಕ್ಷಣಾ ಕೇಂದ್ರ, ಕರ್ನಾಟಕದ ಮೀಸಲಾದ ಕೇಂದ್ರವು ರಾಜ್ಯದ ಅತಿದೊಡ್ಡ 80 ಚಿರತೆಗಳನ್ನು ಹೊಂದಿದೆ. ಮೈಸೂರಿನ ಹುಲಿ ರಕ್ಷಣಾ ಕೇಂದ್ರದಲ್ಲಿ ಒಂಬತ್ತು ಚಿರತೆಗಳಿವೆ. ರಾಜ್ಯ ಸರ್ಕಾರ ಶಿವಮೊಗ್ಗ ಮತ್ತು ಬೆಳಗಾವಿಯಲ್ಲಿ ಸಂಚಾರಿ ಚಿರತೆ ತಂಗುದಾಣಗಳನ್ನು ಸಹ ಸ್ಥಾಪಿಸುತ್ತಿದೆ.
ಪ್ರಸ್ತುತ ನಾವು ಸೆರೆಹಿಡಿಯುವುದು ಮತ್ತು ಬಿಡುಗಡೆ ವಿಧಾನದಲ್ಲಿ ಕೆಲಸ ಮಾಡುತ್ತಿದ್ದೇವೆ, ಕನಿಷ್ಠ ಅಥವಾ ಯಾವುದೇ ಮಾನವ ಸಂಚಾರ ಇಲ್ಲದ ಸ್ಥಳಗಳು ಎಂದು ಖಚಿತಪಡಿಸಿಕೊಂಡು ನಂತರ ಬಿಡುಗಡೆ ಮಾಡುತ್ತೇವೆ. ಆದರೆ ಚಿರತೆ ಗಾಯಗೊಂಡರೆ, ರಾಜಕೀಯ ಮತ್ತು ನಾಗರಿಕರ ಒತ್ತಡ ಹೆಚ್ಚಾದರೆ, ಚಿರತೆಯನ್ನು ರಕ್ಷಣಾ ಕೇಂದ್ರದಲ್ಲಿ ತಡೆಹಿಡಿಯಲಾಗುತ್ತದೆ. ರಕ್ಷಣಾ ಕೇಂದ್ರಗಳಲ್ಲಿ ಅವುಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಸ್ಥಳಾವಕಾಶದ ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೀಗಾಗಿ ಮೂಲಸೌಕರ್ಯ, ವಸತಿ ಮತ್ತು ವಾಣಿಜ್ಯ ಯೋಜನೆಗಳನ್ನು ಮಂಜೂರು ಮಾಡುವಾಗ ಅಥವಾ ಹೊರವಲಯಕ್ಕೆ ನಗರಗಳನ್ನು ವಿಸ್ತರಿಸುವಾಗ ಅರಣ್ಯ ಇಲಾಖೆಯನ್ನು ನಗರ ಯೋಜನಾ ಸಮಿತಿಯ ಭಾಗವಾಗಿಸುವಂತೆ ನಾವು ನಗರಾಭಿವೃದ್ಧಿ, ನಗರ ಪಾಲಿಕೆಗಳು ಮತ್ತು ಜಿಲ್ಲಾಡಳಿತಗಳನ್ನು ಕೇಳುತ್ತಿದ್ದೇವೆ ಎಂದು ಅಧಿಕಾರಿ ಹೇಳಿದರು.
Advertisement