
ಮೈಸೂರು: ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಯ ಮೊದಲ ಹಂತದ ಕೆಲಸ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶುಕ್ರವಾರ ಹೇಳಿದರು.
ಮೈಸೂರು ವಿಮಾನ ನಿಲ್ದಾಣದ ಸಲಹಾ ಸಮಿತಿ ಸಭೆಯಲ್ಲಿ ಭಾಗವಹಿಸಿದ ಅವರು, ಹಲವು ವಿಷಯಗಳ ಕುರಿತು ಚರ್ಚಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ಪ್ರವಾಸೋದ್ಯಮ ಕೇಂದ್ರ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ದಿಗೆ ವಿಮಾನಯಾನ ಸಂಪರ್ಕ ಅಗತ್ಯ. ಈ ನಿಟ್ಟಿನಲ್ಲಿ ಮೈಸೂರಿಗೆ ಸಂಪರ್ಕ ಕಲ್ಪಿಸುವ ಸುಮಾರು 18 ರಿಂದ 20 ವಿಮಾನ ಯಾನ ಸಂಸ್ಥೆಗಳು ಒಂದಾಗಿದ್ದು, ಇದೇ ಮಾರ್ಚ್ ತಿಂಗಳಿನಿಂದ ಕೇರಳದಿಂದ ಮೈಸೂರಿಗೆ ವಿಮಾನಯಾನ ಸಂಪರ್ಕ ಆರಂಭವಾಗಲಿದೆ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಕಾರ್ಯದ ಮೊದಲ ಹಂತ ಕೈಗೆತ್ತಿಕೊಳ್ಳಲು ಹೆಚ್ಚುವರಿ ಜಿಲ್ಲಾಧಿಕಾರಿ 45 ಎಕರೆ ಸ್ವಾಧೀನಕ್ಕೆ ಅನುಮೋದನೆ ನೀಡಿದ್ದಾರೆ. ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ವಿಮಾನ ನಿಲ್ದಾಣ ವಿಸ್ತರಣೆಯ ಕೆಲಸ ಪ್ರಾರಂಭವಾಗಲಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಮೈಸೂರಿನಲ್ಲಿ ಪ್ರವಾಸೋದ್ಯಮ ಹಾಗೂ ವ್ಯಾಪಾರಕ್ಕೆ ಹೆಚ್ಚಿನ ಅವಕಾಶಗಳಿವೆ. ಆದರೆ, ಮೈಸೂರಿನಿಂದ ಬೇರೆ ಕಡೆ ಹಾಗೂ ಹಲವು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹಲವು ವಿಮಾನ ಮಾರ್ಗಗಳು, ಹಲವಾರು ಕಾರಣಗಳಿಂದ ರದ್ದಾಗಿದೆ. ಮುಂದಿನ ದಿನಗಳಲ್ಲಿ ದೇಶದ ಇತರ ಕಡೆಗಳಿಂದ ವಿಮಾನಯಾನ ಸೇವೆ ಆರಂಭಿಸುವ ಬಗ್ಗೆ ಹಲವು ವಿಮಾನಯಾನ ಸಂಸ್ಥೆಗಳ ಜತೆ ಸಂಪರ್ಕ ಇದೆ. ಇದಕ್ಕಾಗಿ ಮೈಸೂರಿನ ಟ್ರಾವೆಲ್ಸ್ ಅಸೋಸಿಯೇಟ್ಸ್ , ಹೋಟೆಲ್ ಮಾಲೀಕರ ಸಂಘ ಹಾಗೂ ಇತರ ಸಂಸ್ಥೆಗಳ ಜತೆ ಮಾತುಕತೆ ನಡೆಸಿದ್ದು, ಪ್ರವಾಸೋದ್ಯಮದ ದೃಷ್ಟಿಯಿಂದ ಹೆಚ್ಚಿನ ವಿಮಾನಯಾನ ಸಂಪರ್ಕ ಸೇವೆ ಆರಂಭಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು,
ಮುಂದಿನ ದಿನಗಳಲ್ಲಿ ಆದಷ್ಟು ಬೇಗ ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಯಾಗಲಿದ್ದು, ಈಗಾಗಲೇ ಕೆಪಿಟಿಸಿಎಲ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದೇವೆ ಎಂದರು.
Advertisement