
ಬೆಂಗಳೂರು: ಬಸ್ ದರ ಏರಿಕೆ ವಿರುದ್ಧ ನಡೆದ ಪ್ರತಿಭಟನೆ ವೇಳೆ ನನ್ನ ಮತ್ತು ಪೊಲೀಸರ ಮಧ್ಯೆ ನಡೆದಿದ್ದ ವಾಗ್ವಾದದ ವಿಡಿಯೋವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಕಟ್ ಮಾಡಿ, ಎಡಿಟ್ ಮಾಡಿ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದರ ವಿರುದ್ಧ ದೂರು ನೀಡಿದ್ದು, ಕಾನೂನು ಹೋರಾಟ ನಡೆಸುತ್ತೇನೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಶನಿವಾರ ಹೇಳಿದ್ದಾರೆ.
ಈ ಸಂಬಂಧ ಬೆಂಗಳೂರಿನ ಪಶ್ಚಿಮ ವಿಭಾಗದ ಸೈಬರ್ ಎಕನಾಮಿಕ್ಸ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಉಪ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅಶೋಕ ಅವರು, ನಾನು ಯಾವುದೇ ಆಕ್ಷೇಪಾರ್ಹ ಪದವನ್ನು ಹೇಳಿಲ್ಲ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂವಹನ ಅಧ್ಯಕ್ಷ ರಮೇಶ್ ಬಾಬು, ಸಹ ಅಧ್ಯಕ್ಷೆ ಐಶ್ವರ್ಯ ಮಹದೇವ್, ಉಪಾಧ್ಯಕ್ಷ ಇ.ಸತ್ಯಪ್ರಕಾಶ್, ಕೆಪಿಸಿಸಿ ಸಾಮಾಜಿಕ ಮಾಧ್ಯಮ ಸಹ ಅಧ್ಯಕ್ಷ ವಿಜಯ್ ಮತ್ತಿಕಟ್ಟಿ ಮತ್ತು ನಿಕೇತ್ ರಾಜ್ ಮೌರ್ಯ ವಿರುದ್ಧ ಆರ್.ಅಶೋಕ್ ಅವರು ದೂರು ನೀಡಿದ್ದು, ಎಫ್ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
03 ಜನವರಿ 2025 ರಂದು ಅಶೋಕ್ ನಗರದ KSRTC ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 11:30 ರ ಸುಮಾರಿಗೆ ನಾನು ಪ್ರತಿಪಕ್ಷದ ನಾಯಕನಾಗಿ ಇತರ ಬಿಜೆಪಿ ನಾಯಕರೊಂದಿಗೆ ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಿ, ಬಸ್ ಟಿಕೆಟ್ ದರ ಏರಿಕೆ ಕುರಿತು ಮಾಹಿತಿ ನೀಡುತ್ತಿದ್ದೆ. ಸರ್ಕಾರವು ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಮಕೈಗೊಂಡಿಲ್ಲ ಎಂದು ತಿಳಿಸಲಾಗುತ್ತಿತ್ತು. ಈ ವೇಳೆ ಕೆಲ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರನ್ನು ಭೇಟಿಯಾಗದಂತೆ ತಡೆಯಲು ಯತ್ನಿಸಿದರು. ಈ ಸಮಯದಲ್ಲಿ ಸಾರ್ವಜನಿಕರಿಗೆ ಪ್ರಸ್ತುತ ವ್ಯವಹಾರಗಳ ಬಗ್ಗೆ ಮತ್ತು ಕರ್ನಾಟಕ ಸರ್ಕಾರ ಕೈಗೊಂಡ ನಿರ್ಧಾರಗಳ ಬಗ್ಗೆ ಸಂವಹನ ನಡೆಸುವಾಗ ನನ್ನೊಂದಿಗೆ ಹಸ್ತಕ್ಷೇಪ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೆ.
ಇದಕ್ಕೆ ಪ್ರತಿಯಾಗಿ, ಪೊಲೀಸರು ನನ್ನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅವರು ಯಾವುದೇ ಕಾನೂನಿನ ಅಧಿಕಾರವಿಲ್ಲದೆ ನನ್ನನ್ನು ತಡೆಯಲು ಪ್ರಯತ್ನಿಸಿದರು. ಆ ಸಮಯದಲ್ಲಿ, ನಾನು ಕರ್ನಾಟಕದ ವಿರೋಧ ಪಕ್ಷದ ನಾಯಕನಾಗಿದ್ದೇನೆ ಮತ್ತು ಸಾರ್ವಜನಿಕರಿಗೆ ಮಾಹಿತಿಯನ್ನು ತಿಳಿಸುವಾಗ ನನ್ನೊಂದಿಗೆ ಹಸ್ತಕ್ಷೇಪ ಮಾಡಬಾರದು ಮತ್ತು ಇದು ನನ್ನ ಸಾಂವಿಧಾನಿಕ ಹಕ್ಕು ಎಂದು ನಾನು ಪೊಲೀಸ್ ಅಧಿಕಾರಿಗಳಿಗೆ ಸ್ಪಷ್ಟವಾಗಿ ತಿಳಿಸಿದೆ.
ಈ ಸನ್ನಿವೇಶದಲ್ಲಿ ನಾನು ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಿದ್ದೇನೆ. ಆದರೆ, ಕಾಂಗ್ರೆಸ್ ಅಧಿಕೃತ ಎಕ್ಸ್ ಖಾತೆಯಲ್ಲಿ 03.01 2025 ರಂದು 17:03 ಗಂಟೆಗೆ ವಿಡಿಯೋವನ್ನು ಪೋಸ್ಟ್ ಮಾಡಿದೆ. ಈ ವಿಡಿಯೋದಿಂದ ನಾನು ಆಘಾತಕ್ಕೊಳಗಾಗಿದ್ದೇನೆ, ನಕಲಿ ಎಡಿಟ್ ವಿಡಿಯೋವನ್ನು ಹರಿಬಿಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ದೂರಿನ ಪ್ರತಿಯನ್ನು ಆಶೋಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಬಸ್ ದರ ಏರಿಕೆ ವಿರೋಧಿಸಿ ನಿನ್ನೆ ನಡೆದ ಪ್ರತಿಭಟನೆ ವೇಳೆ ನಾನು ಆಕ್ಷೇಪಾರ್ಹ ಮಾತು ಆಡಿದ್ದೇನೆ ಎಂದು ಸುಳ್ಳು ಸುದ್ದಿ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದೆ. ಆ ಮೂಲಕ ಕರ್ನಾಟಕದಲ್ಲಿರುವ ಡರ್ಟಿ ಟ್ರಿಕ್ಸ್ ಇಲಾಖೆಯು ನನ್ನ ಪ್ರತಿಷ್ಠೆಗೆ ಧಕ್ಕೆ ತರಲು ನಕಲಿ ಮತ್ತು ತಿರುಚಿದ ವಿಡಿಯೋಗಳನ್ನು ಹರಿಬಿಟ್ಟಿದೆ. ಈ ಪ್ರತಿಯೊಂದು ಪ್ರಕರಣಗಳಿಗೆ ನಾನು ಕಾನೂನಿನ ಮೂಲಕ ಪ್ರತಿಕ್ರಿಯಿಸುತ್ತೇನೆ. ಆ ಮೂಲಕ ಇದರ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ. ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಸೆಲ್ ಮತ್ತು ಅಪರಾಧಿಗಳನ್ನು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
Advertisement