ಬೆಳಗಾವಿ ಜಿಲ್ಲಾಡಳಿತದ ವಿರೋಧ ನಡುವೆಯೂ ಸಂಭಾಜಿ ಮಹಾರಾಜ ಪ್ರತಿಮೆ ಅನಾವರಣ!

ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಮಹಾರಾಷ್ಟ್ರ ಸಂಪುಟ ಸಚಿವ ಶಿವೇಂದ್ರರಾಜೇ ಭೋಸ್ಲೆ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದರು.
ಸಂಭಾಜಿ ಮಹಾರಾಜ ಪ್ರತಿಮೆ ಅನಾವರಣಗೊಳಿಸಿರುವುದು.
ಸಂಭಾಜಿ ಮಹಾರಾಜ ಪ್ರತಿಮೆ ಅನಾವರಣಗೊಳಿಸಿರುವುದು.
Updated on

ಬೆಳಗಾವಿ: ಜಿಲ್ಲಾಡಳಿತದ ವಿರೋಧದ ನಡುವೆಯೂ ಭಾನುವಾರ ರಾತ್ರಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಗೊಂಡಿದೆ.

ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಮಹಾರಾಷ್ಟ್ರ ಸಂಪುಟ ಸಚಿವ ಶಿವೇಂದ್ರರಾಜೇ ಭೋಸ್ಲೆ ಅವರು ಪ್ರತಿಮೆಯನ್ನು ಅನಾವರಣಗೊಳಿಸಿದರು.

ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಅಭ್ಯರ್ಥಿ ರಾಮಕಾಂತ್ ಕೊಂಡುಸ್ಕರ್ ಅವರನ್ನು ಸೋಲಿಸಿದ್ದರು. ಈ ನಡುವೆ ಛತ್ರಪತಿ ಸಂಭಾಜಿಯವರ ಪ್ರತಿಮೆಯನ್ನು ಕೆಲಸ ಪೂರ್ಣಗೊಳ್ಳದ ಕಾರಣವನ್ನು ನೀಡಿದ ಕೊಂಡುಸ್ಕರ್ ಅವರು, ಪ್ರತಿಮೆ ಅನಾವರಣಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಈ ಮಧ್ಯೆ ಸಚಿವ ಜಾರಕಿಹೊಳಿಯವರೂ ಕೊಂಡುಸ್ಕರ್ ಅವರಿಗೆ ಬೆಂಬಲ ಸೂಚಿಸಿದ್ದರು.

ಇದರ ಬೆನ್ನಲ್ಲೇ ಪ್ರತಿಮೆ ಅನಾವರಣ ಕಾರ್ಯಕ್ರಮ ರಾಜಕೀಯ ಜಟಾಪಟಿಗೆ ಕಾರಣವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಂಡಳಿ ಪ್ರತಿಮೆ ಅನಾವರಣಕ್ಕೆ ಅನುಮತಿ ನಿರಾಕರಿಸಿತ್ತು.

ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಮತ್ತು ಭಾನುವಾರದ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ನೀಡಲಾಗಿಲ್ಲ ಎಂದು ಬೆಳಗಾವಿಯ ಉಪ ಆಯುಕ್ತರು ಘೋಷಿಸಿದ್ದರು.

ಬಳಿಕ ಪ್ರತಿಮೆ ಅನಾವರಣ ಮಾಡಿಯೇ ಮಾಡುತ್ತೇವೆ. ಇದರಲ್ಲಿ ಯಾವುದೇ ಬದಲಾವೆ ಇಲ್ಲ ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಘೋಷಿಸಿದ್ದರು.

ಸಂಭಾಜಿ ಮಹಾರಾಜ ಪ್ರತಿಮೆ ಅನಾವರಣಗೊಳಿಸಿರುವುದು.
ಪೂರ್ವ ಲಡಾಖ್‌ನಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಅನಾವರಣ: ಚರ್ಚೆ ಹುಟ್ಟುಹಾಕಿದ ಭಾರತೀಯ ಸೇನೆ!

ಬಳಿಕ ಶನಿವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಎಂ. ರೋಷನ್ ಅವರು ಶಾಸಕರ ಅಭಯ್ ಪಾಟೀಲ್ ಹಾಗೂ ಇತರರೊಂದಿಗೆ ಈ ವಿಷಯದ ಬಗ್ಗೆ ಚರ್ಚಿಸಲು ಸಭೆ ನಡೆಸಿದರು. ಈ ವೇಳೆ ಅಭಯ್ ಪಾಟೀಲ್ ಅವರು ಶಾಂತಿ ಮತ್ತು ಸಾಮರಸ್ಯದಿಂದ ಕಾರ್ಯಕ್ರಮವನ್ನು ಆಯೋಜಿಸುವ ಭರವಸೆ ನೀಡಿದರು.

ಈ ನಡುವೆ ಪ್ರತಿಮೆ ಅನಾವರಣಗೊಳಿಸಲು ಸಿದ್ಧತೆ ಪರಿಶೀಲನೆಗೆ ಆಗಮಿಸಿದ ಮೇಯರ್ ಸವಿತಾ ಕಾಂಬಳೆ ಮತ್ತು ಉಪ ಮೇಯರ್ ಆನಂದ ಚವ್ಹಾಣ ಅವರಿಗೆ ಪಾಲಿಕೆ ಉಪ ಆಯುಕ್ತೆ ಲಕ್ಷ್ಮೀ ನಿಪ್ಪಾಣಿಕರ ತಡೆದ ಪ್ರಸಂಗವೂ ನಡೆಯಿತು. ಈ ವೇಳೆ ಮೇಯರ್ ಸಂವಿತಾ ಅವರು ಗರಂ ಆದರು,

ಪ್ರತಿಮೆ ಸುತ್ತಲೂ ಇರುವ ಕಟ್ಟಿಗೆ ಹಾಗೂ ಹಸಿರು ಪರದೆ ಬಿಚ್ಚಬೇಕು. ಇಲ್ಲದಿದ್ದರೆ ನಾನೇ ತೆರಳಿ ಪರದೆ ಬಿಚ್ಚಲೇ ಎಂದು ಪ್ರಶ್ನಿಸಿದರು. ಸ್ಥಳಕ್ಕೆ ಆಗಮಿಸುವಂತೆ ಮೇಲಧಿಕಾರಿಗಳಿಗೆ ತಿಳಿಸುವಂತ ಪಟ್ಟು ಹಿಡಿದರು. ಇದಕ್ಕೆ ಪ್ರತ್ಯುತ್ತರ ನೀಡದೇ ನಿಪ್ಪಾಣಿಕರ ಮೌನವಹಿಸಿದರು. ಬಳಿಕ ಮೇಯರ್ ಸಮ್ಮುಖದಲ್ಲಿ ಪ್ರತಿಮೆ ಸುತ್ತಲೂ ಹಾಕಿದ್ದ ಬಟ್ಟೆ ತೆರವುಗೊಳಿಸಲಾಯಿತು.

ಬಳಿಕ ಸಂಭಾಜಿ ಮಹಾರಾಜರ ಪ್ರತಿಮೆ ಸ್ವಚ್ಛಗೊಳಿಸಿ, ಕ್ಷೀರಾಭಿಷೇಕ ಮಾಡಿ, ಪೂಜೆ ಸಲ್ಲಿಸಲಾಯಿತು. ಸಂಭಾಜಿ ಪ್ರತಿಮೆ ಹಾಗೂ ಭವನದ ಕಟ್ಟಡವನ್ನು ಝಗಮಗಿಸುವ ವಿದ್ಯುದ್ದೀಪಾಲಂಕಾರ, ಹೂವಿನಿಂದ ಸಿಂಗರಿಸಲಾಗಿತ್ತು. ಕೇಲರಿ ಧ್ವಜಗಳು ರಾರಾಜಿಸಿದವು. ಪ್ರತಿಮೆ ಅನಾವರಣಕ್ಕೆ ವಿರೋಧಿಸಿದ ಯುವಕರ ಗುಂಪು ಕೇಸರಿ ಧ್ವಜ ತೆಗೆಯಲು ಯತ್ನಿಸಿದಾಗ ಎರಡೂ ಗುಂಪಿನ ಯುವಕರ ನಡುವೆ ವಾಗ್ವಾದ ನಡೆದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಯುವಕರ ಗುಂಪು ಚದುರಿಸಲು ಪೊಲೀಸರು ಹರಹಾಸರ ಮಾಡಿದರು.

ಮತ್ತೊಂದೆಡೆ ಶಾಸಕ ಅಭಯ ಪಾಟೀಲ ಬೆಂಬಲಿಗರು ಶೋಭಾಯಾತ್ರೆ ಮೂಲಕ ಆಗಮಿಸಿ, ಪ್ರತಿಮೆ ಅನಾವರಣಗೊಳಿಸುವ ಮೂಲಕ ಗೊಂದಲಗಳಿಗೆ ತೆರೆ ಬಿದ್ದಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಹಾರಾಷ್ಟ್ರ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥ ಶಿವೇಂದ್ರ ರಾಜೇ ಭೋಸ್ಲೆ ಅವರಿಗೆ ಭವ್ಯ ಕೋರಿದ್ದು ಕಂಡು ಬಂದಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com