
ತುಮಕೂರು: ಹಾಲಿನ ವಾಹನದಲ್ಲಿ ಅಂಬೇಡ್ಕರ್ ಅವರ ʼಜೈ ಭೀಮ್ʼ ಹಾಡು ಹಾಕಿದ್ದಕ್ಕೆ ದಲಿತ ಯುವಕನ ಖಾಸಗಿ ಭಾಗಕ್ಕೆ ಒದ್ದು ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆಯೊಂದು ಗುಬ್ಬಿ ತಾಲೂಕಿನ ಕಸಬಾ ಹೋಬಳಿಯ ಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಯುವಕನನ್ನು 19 ವರ್ಷದ ದೀಪು ಎಂದು ತಿಳಿದುಬಂದಿದೆ. ದೀಪು ತುಮಕೂರು ಗ್ರಾಮಾಂತರದ ಸಿರಿವರ ಗ್ರಾಮದ ದಲಿತ ಸಮುದಾಯದ ಯುವಕ ಎಂದು ತಿಳಿದುಬಂದಿದೆ. ಇದೀಗ ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರೈತರಿಂದ ಹಾಲು ಖರೀದಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದ ದೀಪು (19) ವ್ಯಾನ್ ಚಾಲಕ ನರಸಿಂಹ ಮೂರ್ತಿಯೊಂದಿಗೆ ಪ್ರಯಾಣಿಸುತ್ತಿದ್ದ. ವಾಹನದಲ್ಲಿ ಅಂಬೇಡ್ಕರ್ ಅವರ ಹಾಡನ್ನು ಹಾಕಿದ್ದರು. ಸಂಜೆ 6 ಗಂಟೆ ಸುಮಾರಿಗೆ ತಾಲ್ಲೂಕಿನ ಕಸಬಾ ಹೋಬಳಿ ಮುದ್ದನಹಳ್ಳಿ ಗ್ರಾಮದ ರೈಲ್ವೆ ಇಲಾಖೆಯ ಪೊಲೀಸ್ ಅಧಿಕಾರಿ ಚಂದ್ರಶೇಖರ್ ಮತ್ತು ಮತ್ತೊಬ್ಬ ವ್ಯಕ್ತಿ ನರಸಿಂಹರಾಜು ಎಂಬುವರು ಆರ್‌ಪಿಎಫ್ ಸಿಬ್ಬಂದಿಯಂತೆ ನಟಿಸಿ ವ್ಯಾನ್ ಅನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಹಾಡನ್ನು ನಿಲ್ಲಿಸುವಂತೆ, ಮತ್ತೆ ಹಾಕದಂತೆ ಎಚ್ಚರಿಸಿದ್ದಾರೆ.
ಇದೇ ವೇಳೆ ಯುವಕರ ಜಾತಿ ಪ್ರಶ್ನಿಸಿದ್ದಾರೆ. ಯುವಕರು ಎಸ್ಸಿ-ಮಾದಿಗ ಸಮುದಾಯ (ದಲಿತ ಜಾತಿ)ವೆಂದು ಹೇಳಿದ್ದು, ಈ ವೇಳೆ ಇಬ್ಬರನ್ನೂ ವಾಹನದಿಂದ ಹೊರಗೆಳೆದು ಮನಬಂದಂತೆ ಥಳಿಸಿದ್ದಾರೆ. ದೀಪು ಅವರ ಖಾಸಗಿ ಭಾಗಕ್ಕೆ ಒದ್ದಿದ್ದಾರೆ. ಇದರಿಂದ ದೀಪು ಅವರು ಗಂಭೀರವಾಗಿ ಗಾಯಗೊಂಡಿದ್ದು, ನೋವಿನಿಂಗ ಕೂಗಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಜನರು ಇಬ್ಬರನ್ನೂ ಗುಬ್ಬಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ.
ದೀಪು ಅವರ ಚಿಕ್ಕಪ್ಪ ಶ್ರೀನಿವಾಸ್ ಎಂಬುವವರು ಮಾತನಾಡಿ, ವೈದ್ಯರು ಜೀವ ಉಳಿಸಿದ್ದಾರೆ. 9 ಹೊಲಿಗೆಗಳನ್ನು ಹಾಕಲಾಗಿದ್ದು, ಅಪಾಯದಿಂದ ಪಾರಾಗಿದ್ದಾನೆಂದು ಹೇಳಿದ್ದಾರೆ. ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 1989 ರ ಸೆಕ್ಷನ್ 307 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಗುಬ್ಬಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಸುನಿಲ್ ಅವರು ಮಾತಾಡಿ, ಆರೋಪಿಗಳು ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಎಸ್ಪಿ ಕೆ.ವಿ. ಅಶೋಕ್ ಅವರು ಮಾತನಾಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
Advertisement