ಮುಂಡಗಾರು ಲತಾ ಸೇರಿ 6 ಮಂದಿ ಮಾವೋವಾದಿ ನಕ್ಸಲರು ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಎದುರು ಶಸ್ತ್ರಾಸ್ತ್ರ ಹೋರಾಟ ತೊರೆದು ಶರಣಾದರು. ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ 6 ನಕ್ಸಲರು ಶರಣಾಗತರಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಕೊನೆಗಳಿಗೆಯಲ್ಲಿ ಬದಲಾವಣೆಯಾಗಿದ್ದು, ನೇರವಾಗಿ ಸಿಎಂ ಎದುರು ನಕ್ಸಲರು ಶರಣಾಗಿದ್ದಾರೆ. ಸುಂದರಿ ಕುಲ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ.ವಸಂತ, ಮತ್ತು ಜೀಶಾ ರಾಣಿ, ಲತಾ ಅವರೊಂದಿಗೆ ಶರಣಾಗಿರುವ ಇನ್ನಿತರ ನಕ್ಸಲರಾಗಿದ್ದಾರೆ. ಈಮಧ್ಯೆ, ರಾಜ್ಯದಲ್ಲಿ ನಕ್ಸಲರ ಶರಣಾಗತಿಗಾಗಿ ಘೋಷಿಸಲಾಗಿರುವ ಪ್ಯಾಕೇಜ್ ಗೆ ವಿಪಕ್ಷ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಆರು ಮಂದಿ ನಕ್ಸಲರಿಗೆ ರಾಜ್ಯ ಸರ್ಕಾರ ಶರಣಾಗತಿ ಪ್ಯಾಕೇಜ್ ನೀಡುತ್ತಿರುವುದು ನಾಗರಿಕ ಸಮಾಜವನ್ನು ಬೆಚ್ಚಿಬೀಳಿಸಿದೆ ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ. ”ಯಾವ ಮಾನದಂಡದ ಮೇಲೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ? ಎಂಬುದನ್ನು ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗೆಲಲ್ಲ ನಕ್ಸಲರಿಗೆ – ಉಗ್ರರಿಗೆ ಸುಗ್ಗಿ. ಅವರಿಗೆ ಕ್ಷಮೆ,ಪ್ರಕರಣ ರದ್ದು, ಸುಖ-ಸೌಕರ್ಯ ಎಲ್ಲವೂ” ಸಿಗಲಿದೆ ಎಂದು ಸುನಿಲ್ ಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನಲ್ಲಿ ಡಿನ್ನರ್ ಸಭೆ ಬಹಳ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಡಿನ್ನರ್ ಸಭೆಗಳಿಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಡಾ. ಪರಮೇಶ್ವರ್ ಅವರು ಎಸ್ಸಿ, ಎಸ್ಟಿ ಶಾಸಕರು, ಸಚಿವರ ಡಿನ್ನರ್ ಮೀಟಿಂಗ್ ಆಯೋಜನೆ ಮಾಡಲು ಮುಂದಾಗಿದ್ದರು. ಈ ಬೆಳವಣಿಗೆಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೈಕಮಾಂಡ್ ಗಮನಕ್ಕೆ ತಂದು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಡಿನ್ನರ್ ಸಭೆಗಳಿಗೆ ಬ್ರೇಕ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಿನ್ನರ್ ಸಭೆ ಮುಂದೂಡುವಂತೆ ಕಾಂಗ್ರೆಸ್ ಹೈಕಮಾಂಡ್ನಿಂದ ಬಂದಿರುವ ಸೂಚನೆಯ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ನಮ್ಮ ಸಭೆಯನ್ನು ಸಹಿಸುವುದಿಲ್ಲವೆಂದು ಯಾರೂ ಹೇಳಿಲ್ಲ, ನಮ್ಮದೇ ಆಂತರಿಕ ಸಭೆಯಾಗಿರುವುದರಿಂದ ದೆಹಲಿ ನಾಯಕರಿಗೆ ಹೇಳುವ ಅವಶ್ಯಕತೆಯಿಲ್ಲ ಎಂದು ನಾವು ಹೇಳಿರಲಿಲ್ಲ. ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ ಅಷ್ಟೆ. ಸಭೆ ನಡೆಸುತ್ತೇವೆ ಎಂದಿದ್ದಾರೆ.
ಕೇಕ್ ತಯಾರಿಸಲು ತಂದಿದ್ದ ಎಸೆನ್ಸ್ ಕುಡಿದು ಮೂವರು ಖೈದಿಗಳು ಸಾವನ್ನಪ್ಪಿರುವ ಘಟನೆ ಮೈಸೂರಿನ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಖೈದಿಗಳು ಹೊಸ ವರ್ಷದ ಮುನ್ನಾದಿನದಂದು ಹಾಸನದ ರಮೇಶ್, ನಾಗರಾಜ್, ಮತ್ತು ಸಾತಗಳ್ಳಿಯ ಮಾದೇಶ್ ಎಸೆನ್ಸ್ ಸೇವಿಸಿ ಅಸ್ವಸ್ಥರಾಗಿದ್ದರು. ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅವರನ್ನು ಕೆಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಾಗರಾಜ್ ಮತ್ತು ಮಾದೇಶ್ ಮಂಗಳವಾರ ಮೃತಪಟ್ಟಿದ್ದು, ರಮೇಶ್ ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಖೈದಿಗಳು ಜೈಲಿನ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಹೊಸ ವರ್ಷದ ಹಿನ್ನಲೆ ಕೇಕ್ ತಯಾರಿಸಲು ಸಾಮಾಗ್ರಿಗಳನ್ನು. ಈ ಮೂವರು ಕಿಕ್ ಗಾಗಿ ಯಾರಿಗೂ ಹೇಳದೆ ಈ ಎಸೆನ್ಸ್ ಕುಡಿದಿದ್ದರು.
ಇಂದು ಬೆಳ್ಳಂಬೆಳಿಗ್ಗೆ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಾಯಚೂರು, ಚಿಕ್ಕಮಗಳೂರು, ಬೀದರ್, ಬೆಳಗಾವಿ, ಗದಗ, ಬಳ್ಳಾರಿ, ಮತ್ತು ಬೆಂಗಳೂರಿನಲ್ಲಿ ದಾಳಿ ಒಟ್ಟು 8 ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ ಮನೆ ಮೇಲೆ, ಚಿಕ್ಕಮಗಳೂರು ಜಿಲ್ಲೆ ಕಡೂರಿನ ಆಡಳಿತ ವೈದ್ಯಾಧಿಕಾರಿ ಡಾ. ಎಸ್ಎನ್ ಉಮೇಶ್ ನಿವಾಸದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿಯ ಅಧಿವೇಶನದಲ್ಲಿ ವಿಧಾನಸಭಾ ಸದಸ್ಯ ಸಿ.ಟಿ ರವಿ ಅವರ ದೂರಿನ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಪತ್ರ ಬರೆದು ಸಲಹೆ ನೀಡಿದ್ದಾರೆ. ಅಧಿವೇಶನ ಸಂದರ್ಭದಲ್ಲಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ಸಿ.ಟಿ ರವಿ ಅವರು ನನಗೆ ದೂರು ನೀಡಿದ್ದಾರೆ ಎಂದು ರಾಜ್ಯಪಾಲರು ಸಿಎಂ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಚುನಾಯಿತ ಜನಪ್ರತಿನಿಧಿಗಳ ಜತೆ ಪೊಲೀಸರ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಿ ಎಂದು ರಾಜ್ಯಪಾಲರು ಹೇಳಿದ್ದಾರೆ.
Advertisement