ನಮ್ಮ ತೆರಿಗೆ ನಮ್ಮ ಹಕ್ಕಿಗಾಗಿ ಹೋರಾಟ ಮಾಡಲೇ ಬೇಕು: ಡಿಸಿಎಂ ಡಿ.ಕೆ ಶಿವಕುಮಾರ್
ಬೆಂಗಳೂರು: "ಕೇಂದ್ರದ ಬಳಿ ನಮ್ಮ ತೆರಿಗೆ ನಮ್ಮ ಹಕ್ಕಿಗಾಗಿ ನಾವು ಹೋರಾಟ ಮಾಡಲೇ ಬೇಕು. ನಮ್ಮ ರಾಜ್ಯದ ಹಿತವನ್ನು ಕಾಪಾಡಲೇಬೇಕು" ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟ ಮುಂದುವರೆಯಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, "ಬಿಜೆಪಿಯ ಇಷ್ಟೊಂದು ಜನ ಸಂಸದರು ಏಕೆ ಮೌನವಾಗಿ ಇದ್ದಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದರು.
"ನೀರಾವರಿ ಮತ್ತು ನಗರಾಭಿವೃದ್ಧಿಗೆ ನೀಡುವ ಅನುದಾನದ ವಿಚಾರದಲ್ಲಿ ಕೇಂದ್ರ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ರಾಜ್ಯದ ಪಾಲಿನ ತೆರಿಗೆ ಅನ್ಯಾಯವನ್ನು ಕಾನೂನಾತ್ಮಕವಾಗಿ ಹೇಗೆ ಎದುರಿಸಬೇಕು ಎಂಬುದನ್ನು ನಮ್ಮ ಮುಖ್ಯಮಂತ್ರಿಗಳು ಅಧ್ಯಯನ ಮಾಡುತ್ತಿದ್ದಾರೆ. ರಾಜ್ಯ ಬಜೆಟ್ ಮಂಡನೆ ವೇಳೆಗೆ ಈ ಅಸಮಾನ ಹಂಚಿಕೆಗೆ ನಾವು ಉತ್ತರ ಕೊಡುತ್ತೇವೆ" ಎಂದು ಹೇಳಿದರು.
ಜ.10 ರಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಒಟ್ಟು 1 ಲಕ್ಷ 70 ಸಾವಿರ ಕೋಟಿ ರೂಪಾಯಿ ಜಿಎಸ್ ಟಿ ಪರಿಹಾರ ಹಣವನ್ನು ಬಿಡುಗಡೆ ಮಾಡಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ. ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು ಹಣ ಲಭ್ಯವಾಗಿದ್ದರೆ ಕರ್ನಾಟಕಕ್ಕೆ 6 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ