ಅಮ್ಮನ ಬದಲು ಕೆಲಸ ಮಾಡುತ್ತಿದ್ದ ಮಗನ ಬಂಧನ; ಲೋಕಾಯುಕ್ತ ದಾಳಿ ವೇಳೆ ಬಿಬಿಎಂಪಿ ಅಕ್ರಮ ಬಯಲು
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕಚೇರಿ ಮೇಲೆ ಶುಕ್ರವಾರ ಸಂಜೆ ನಡೆದ ಲೋಕಾಯುಕ್ತ ದಾಳಿ ವೇಳೆ ಹಲವು ಆಘಾತಕಾರಿ ಅಕ್ರಮಗಳು ಬಹಿರಂಗಗೊಂಡಿವೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ನೇತೃತ್ವದಲ್ಲಿ ಬಿಬಿಎಂಪಿ ಕಚೇರಿ ಮೇಲೆ ದಾಳಿ ನಡೆಸಿದ್ದು, ಈ ವೇಳೆ ತಾಯಿಯ ಬದಲಾಗಿ ಮಗ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.
ಸೌತ್ ಎಂಡ್ ಸರ್ಕಲ್‌ನಲ್ಲಿರುವ ಸಹಾಯಕ ಕಂದಾಯ ಅಧಿಕಾರಿ(ಎಆರ್‌ಒ) ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿರುವ ಕವಿತಾ ಅವರ ಮಗ ನವೀನ್ ಅವರನ್ನು ನ್ಯಾಯಮೂರ್ತಿ ವೀರಪ್ಪ ಅವರು ವಿಚಾರಿಸಿದಾಗ, ಸಾರ್ವಜನಿಕರಿಗೆ ಆಗುವ ಅನಾನುಕೂಲತೆಯನ್ನು ತಪ್ಪಿಸಲು ನಾನು ನನ್ನ ತಾಯಿಯ ಪರವಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಯಾವುದೇ ಹಿಂಜರಿಕೆಯಿಲ್ಲದೆ ಹೇಳಿದ್ದಾನೆ. ನವೀನ್ ತನ್ನ ತಾಯಿ ಬದಲು ತಾನು ಗೆಜೆಟೆಡ್ ಅಧಿಕಾರಿಯಂತೆ ಕೆಲಸ ಮಾಡುತ್ತಿರುವುದನ್ನು ಸಮರ್ಥಿಸಿಕೊಳ್ಳುತ್ತಿದ್ದರು ಎಂದು ನ್ಯಾಯಮೂರ್ತಿ ವೀರಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಿಬಿಎಂಪಿ ಕಚೇರಿಗಳಲ್ಲಿ ಇಂತಹ ಅಕ್ರಮ ನಡೆಯುತ್ತಿರುವುದು ವಿಷಾದಕರ ಎಂದು ಅವರು, ಮಗ ತನ್ನ ತಾಯಿಯ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್ ಪಡೆದುಕೊಂಡಿದ್ದು, ತಾಯಿಯ ಬದಲು ಆತನೇ ಸಹಿ ಮಾಡುತ್ತಿರುವುದು ದುರದೃಷ್ಟಕರ. ಇದಲ್ಲದೆ, ಎಆರ್‌ಒ ಸುಜಾತಾ ಅವರು, 10,000 ರೂ. ಪಾವತಿಸಿ ಗೀತಾ ಎಂಬುವರನ್ನ ಸಹಾಯಕ್ಕಾಗಿ ಅನಧಿಕೃತವಾಗಿ ನೇಮಕ ಮಾಡಿಕೊಂಡಿದ್ದರು. "ಇದು ಬಿಬಿಎಂಪಿಯಲ್ಲಿನ ಅರಾಜಕತೆಯನ್ನು ತೋರಿಸುತ್ತದೆ. ನಾವು ಬಿಬಿಎಂಪಿ ಮುಖ್ಯಸ್ಥ ತುಷಾರ್ ಗಿರಿನಾಥ್ ಅವರನ್ನು ವಿಚಾರಣೆಗೆ ಒಳಪಡಿಸುತ್ತೇವೆ" ಎಂದು ಅವರು ಹೇಳಿದರು.
ಲೋಕಾಯುಕ್ತ ಅಧಿಕಾರಿಗಳು ಎಲ್ಲಾ ಆರೋಪಿಗಳ ವಿರುದ್ಧ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ್ದಾರೆ ಮತ್ತು ನವೀನ್ ಅವರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳಿಂದ ಕರ್ತವ್ಯ ದುರುಪಗೋಗ ಹಿನ್ನೆಲೆ ಸಿದ್ದಾಪುರ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ ಕಚೇರಿ ಮುಖ್ಯಸ್ಥರಾದ ಸುಜಾತ, ಕೇಸ್ ವರ್ಕರ್ ಕವಿತಾ, ಮಗ ನವೀನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿ ನವೀನ್ನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಮತ್ತು ಬಿ. ವೀರಪ್ಪ ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ತಂಡ ಬಿಬಿಎಂಪಿಯ ಎಂಟು ವಲಯಗಳ 54 ಕಚೇರಿಗಳ ಮೇಲೆ ಏಕಕಾಲದಲ್ಲಿ ಅನಿರೀಕ್ಷಿತ ದಾಳಿ ನಡೆಸಿದೆ.
ಇ-ಖಾತಾಗಳಿಗೆ ಸಂಬಂಧಿಸಿದಂತೆ ಕಂದಾಯ ಅಧಿಕಾರಿಗಳು ಮತ್ತು ಸಹಾಯಕ ಕಂದಾಯ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಮತ್ತು ಅನಧಿಕೃತ ನಿರ್ಮಾಣಗಳ ವಿರುದ್ಧ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳ ನಿಷ್ಕ್ರಿಯತೆ ವಿರುದ್ಧ ಲೋಕಾಯುಕ್ತಕ್ಕೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ