
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ಪರಿಹಾರ ಎಂದು ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ ಸಿಲ್ಕ್ ಬೋರ್ಡ್‌ವರೆಗೆ ಸುರಂಗ ಮಾರ್ಗ ನಿರ್ಮಾಣಕ್ಕೆ ಡಿಸಿಎಂ ಡಿಕೆಶಿ ಪಟ್ಟು ಹಿಡಿದಿದ್ದಾರೆ. ಡಿಪಿಆರ್ ಕೂಡ ಸಿದ್ಧವಾಗಿದೆ. ಆದರೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ, ಟನಲ್ ಪ್ರಾಜೆಕ್ಟ್ ರದ್ದು ಮಾಡುವಂತೆ ಅಭಿಯಾನ ಶುರುಮಾಡಿದೆ.
ನಗರದಲ್ಲಿ ವಾಹನ ಸಂಚಾರ ವ್ಯವಸ್ಥೆಯನ್ನು ಹದಗೆಡಿಸುವ ಹಾಗೂ ಪರಿಸರಕ್ಕೆ ಧಕ್ಕೆ ತರುವ ಸುರಂಗ ರಸ್ತೆ ಯೋಜನೆಯನ್ನು ಮರು ಪರಿಶೀಲಿಸಬೇಕು’ ಎಂದು ಸಂಸದ ಪಿ.ಸಿ.ಮೋಹನ್ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗಿನ 18 ಕಿ.ಮೀ ಉದ್ದ ಸುರಂಗ ರಸ್ತೆಗೆ 8,043 ಕೋಟಿ ರು. ವೆಚ್ಚ ಮಾಡಲು ಮುಂದಾಗಿದೆ.
ಈ ಯೋಜನೆಯಲ್ಲಿ ಸಾಕಷ್ಟು ತಾಂತ್ರಿಕ ದೋಷಗಳಿವೆ. ನಗರ ಸಂಚಾರ ಯೋಜನೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮುಂಬೈ ಕೋಸ್ಟಲ್ ರಸ್ತೆ ಯೋಜನೆಯ ವಿವರಗಳನ್ನು ಇದರಲ್ಲಿ ಸೇರಿಸಲಾಗಿದೆ ಎಂದಿದ್ದಾರೆ. ನಗರದ ಎಲ್ಲ ಯೋಜನೆಗಳು ನಾಗರಿಕರ ಕೇಂದ್ರೀಕೃತವಾಗಿದ್ದು, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೊಂದಿರಬೇಕು’ ಎಂದು ಹೇಳಿದ್ದಾರೆ.
ಇದೊಂದು ಅವೈಜ್ಞಾನಿಕ ನಿರ್ಧಾರ. ಟನಲ್ ಬೇಡ, ಮೆಟ್ರೋ ಬೇಕು ಎಂದು ಹೇಳಿದ್ದಾರೆ. ಡಿಪಿಆರ್‌ನಲ್ಲಿ ಸಾಕಷ್ಟು ಲೋಪದೋಷ ಹೊಂದಿರುವ ಈ ಪ್ರಾಜೆಕ್ಟ್ ಬೆಂಗಳೂರಿಗೆ ಟ್ರಾಫಿಕ್ ಜಾಮ್ ಸಮಸ್ಯೆ ಬಗೆಹರಿಸಲ್ಲ ಎಂಬುದು ಸಂಸದರ ವಾದ. ಅಲ್ಲದೇ ಸಾವಿರಾರು ಕೋಟಿ ವ್ಯಯಿಸುವ ಬದಲು ಮೆಟ್ರೋ, ಬಿಎಂಟಿಸಿಯಂತಹ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
Advertisement