
ಬೆಂಗಳೂರು: ಜಾತಿ ಗಣತಿ ಸಭೆಯನ್ನು ಮುಂದೂಡುವಂತೆ ರಾಜ್ಯದ ಒಕ್ಕಲಿಗ ಸಂಘದ ನೂತನ ಪದಾಧಿಕಾರಿಗಳಿಗೆ ಸೂಚಿಸಿರುವುದಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಭಾನುವಾರ ಹೇಳಿದ್ದಾರೆ. ಜಗಳ ಬಿಡಿ, ಇಲ್ಲವಾದಲ್ಲಿ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನೂತನ ಪದಾಧಿಕಾರಿಗಳ ತಂಡ ನನ್ನನ್ನು ಭೇಟಿಯಾಗಲು ಬಂದಿತ್ತು. ರಾಜಿ ಸಂಧಾನ ಮಾಡಿಕೊಂಡ ನಂತರ ಅವರೆಲ್ಲ ಒಗ್ಗಟ್ಟಾಗಿ ಬಂದಿದ್ದರು. ಜಗಳ ಮುಂದುವರಿದರೆ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುತ್ತೇನೆ ಎಂದು ಎಚ್ಚರಿಕೆ ನೀಡಿದ ನಂತರ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದಾಗಿ ಅವರು ಒಪ್ಪಿಕೊಂಡಿರುವುದಾಗಿ ತಿಳಿಸಿದರು.
ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಉಪಮುಖ್ಯಮಂತ್ರಿ, ನಾನು ಯಾವುದೇ ಸಭೆ ನಡೆಸಿಲ್ಲ ಅಥವಾ ಅದರ ಅಗತ್ಯವೂ ಇಲ್ಲ. ಜಾತಿ ಗಣತಿ ಕುರಿತು ಸಭೆ ನಡೆಸಲು ಸಂಘದ ಪದಾಧಿಕಾರಿಗಳು ನಿರ್ಧರಿಸಿದ್ದರು. ಇದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗುತ್ತದೆ ಎಂದು ಸಭೆ ಮುಂದೂಡುವಂತೆ ಹೇಳಿದ್ದೇನೆ ಎಂದರು.
ಈ ಬಗ್ಗೆ ಆದಿಚುಂಚನಗಿರಿ ಮಠದ ನಿರ್ಮಾಣಾನಂದನಾಥ ಸ್ವಾಮಿಯವರೊಂದಿಗೆ ಮಾತನಾಡುವುದಾಗಿಯೂ ಹೇಳಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯ ಪ್ರಕಾಶ್ ಹೆಗ್ಡೆ ಅವರು ಜಾತಿ ಗಣತಿ ವರದಿಯನ್ನು ಫೆಬ್ರವರಿ 29, 2024ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದರು. ಇದು ವಿವಿಧ ಹಿಂದುಳಿದ ವರ್ಗಗಳ ಸಮುದಾಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಕೆಲ ಸಮುದಾಯಗಳು ವರದಿಗೆ ವಿರೋಧ ವ್ಯಕ್ತಪಡಿಸುತ್ತಿವೆ.
Advertisement