ಮಲಗಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಅಮಾನವೀಯ ಘಟನೆ ಚಾಮರಾಜಪೇಟೆಯ ವಿನಾಯಕನಗರದಲ್ಲಿ ನಡೆದಿದೆ. ತಡರಾತ್ರಿ ಈ ಘಟನೆ ನಡೆದಿದ್ದು ರಾತ್ರಿಯಿಡೀ ಹಸುಗಳು ರಕ್ತದ ಮಡುವಿನಲ್ಲಿ ನರಳಾಡಿವೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದ್ದು ಚಾಮರಾಜೇಟೆಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹಿಂದೂ ಕಾರ್ಯಕರ್ತರು ಧಾವಿಸಿದ್ದು, ಕೃತ್ಯವನ್ನು ತೀವ್ರ ಖಂಡಿಸಿದ್ದಾರೆ. ಘಟನಾ ಸ್ಥಳಕ್ಕೆ ಸಂಸದ ಪಿ ಸಿ ಮೋಹನ್, ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿದ್ದು, ದುಷ್ಕೃತ್ಯವನ್ನು ಖಂಡಿಸಿದ್ದಾರೆ. ಗೋವುಗಳನ್ನ ದೇವರು ಎಂದು ಪೂಜೆ ಮಾಡುತ್ತೇವೆ. ಸ್ಥಳೀಯ ಪಶು ಆಸ್ಪತ್ರೆ ಉಳಿವಿಗಾಗಿ ಹಸುವಿನ ಮಾಲೀಕರು ಹೋರಾಟ ಮಾಡಿದರು. ಹಸುಗಳನ್ನ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಪ್ರತಿಭಟನೆ ನಡೆಸಿದ್ದರು ಎಂಬ ಕಾರಣಕ್ಕೆ ಕೆಚ್ಚಲು ಕೊಯ್ದಿದ್ದಾರೆ. ಕಿಡಿಗೇಡಿಗಳು ಗೋವುಗಳ ಕೆಚ್ಚಲು ಕೊಯ್ದು ದುಷ್ಕೃತ್ಯ ಎಸಗಿದ್ದಾರೆ. ಕೂಡಲೇ ಕಿಡಿಗೇಡಿಗಳ ಬಂಧಿಸಬೇಕು. ಈ ಸರ್ಕಾರ ಬಂದ ಮೇಲೆ ಇದೆಲ್ಲಾ ಆಗುತ್ತಿದೆ. ಕಿಡಿಗೇಡಿಗಳ ಬಂಧನವಾಗುವವರೆಗೆ ಹೋರಾಟ ನಿಲುವುದಿಲ್ಲ ಎಂದು ಆರ್ ಅಶೋಕ್ ಹೇಳಿದ್ದು, ಹಸುಗಳ ಮಾಲೀಕನಿಗೆ ರೂ.1 ಲಕ್ಷ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಹಸುಗಳ ಕೆಚ್ಚಲು ಕೊಯ್ದಿದ್ದು ತಪ್ಪು, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತೆ. ಯಾರು ಮಾಡಿದ್ದಾರೆಂದು ಗೊತ್ತಿಲ್ಲ, ಆರೋಪಿಗಳ ಪತ್ತೆ ಹಚ್ಚಲಾಗುತ್ತಿದೆ. ಕಮಿಷನರ್ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದ್ದಾರೆ.
ಹಸುಗಳ ಕೆಚ್ಚಲು ಕೊಯ್ದ ದುರ್ಘಟನೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರತಿನಿಧಿಸುವ ಚಾಮರಾಜಪೇಟೆಯಲ್ಲಿ ನಡೆದಿದ್ದು, ನೀಚರನ್ನು ಬಂಧಿಸದಿದ್ದರೆ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಇಸ್ಲಾಮಿಕ್ ಶಕ್ತಿಯ ಪ್ರದರ್ಶನ ಆಗುತ್ತಿದೆ, ಇದು ರಾಕ್ಷಸ ಕೃತ್ಯಕ್ಕೆ ಉದಾಹರಣೆ ಎಂದು ಕಿಡಿಕಾರಿದರು.
ಮಾದಕವಸ್ತು ಕಳ್ಳಸಾಗಣೆದಾರನೊಬ್ಬನನ್ನು ಬಂಧಿಸಲು ಯತ್ನಿಸಿದ ಹೆಡ್‌ಕಾನ್ಸ್‌ಟೇಬಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ಕಲಬುರಗಿಯಲ್ಲಿ ವರದಿಯಾಗಿದೆ. ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಶರಣಪ್ಪ ತಿಳಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿಯ ಬಗ್ಗೆ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ಚೌಕ್ ರಾಜೇಂದ್ರ ಅಪರಾಧ ಪತ್ತೆ ತಂಡದೊಂದಿಗೆ ತನಿಖೆಗೆ ತೆರಳಿದರು. ಶಂಕಿತ ಕಾರಿನಿಂದ ಹೊರಬಂದು ಹೆಡ್ ಕಾನ್ಸ್‌ಟೇಬಲ್ ಗುರುಮೂರ್ತಿ ಮೇಲೆ ದಾಳಿ ಮಾಡಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆರೋಪಿ ಸುಪ್ರೀತ್ ನವಲೆ ಕಲಬುರಗಿ ನಗರದ ಮುತ್ತಂಪುರ ನಿವಾಸಿಯಾಗಿದ್ದಾನೆ. ಆತನ ಕಾರನ್ನು ತಪಾಸಣೆ ವೇಳೆ ನೈಟ್ರೊವೆಟ್ ಮಾತ್ರೆಗಳು ಸೇರಿದಂತೆ ಡ್ರಗ್ಸ್ ಕಳ್ಳಸಾಗಣೆ ಮಾಡುತ್ತಿರುವುದು ಕಂಡುಬಂದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸಿಲುಕಿರುವ ನಟ ದರ್ಶನ್ಗೆ ಈಗ ಹೊಸ ಸಂಕಷ್ಟ ಶುರುವಾಗಿದೆ. ದರ್ಶನ್ ಗನ್ ಲೈಸೆನ್ಸ್ ನ್ನು ಹಿಂಪಡೆಯಲು ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ದರ್ಶನ್ ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ದರ್ಶನ್ ತಮ್ಮ ಭದ್ರತೆಗಾಗಿ ಗನ್ ಲೈಸೆನ್ಸ್ ಪಡೆದಿದ್ದರು. ಆದರೆ ಈಗ ಅವರು ಕೊಲೆ ಪ್ರಕರಣದ ಆರೋಪಿ ಆಗಿರುವ ಕಾರಣ ಲೈನೆನ್ಸ್ ರದ್ದು ಮಾಡುವ ಸಿದ್ಧತೆ ನಡೆಸಿದ್ದು, ‘ನಿಮ್ಮ ಬಳಿ ಇರುವ ಗನ್ ಲೈಸೆನ್ಸ್ ಯಾಕೆ ರದ್ದು ಮಾಡಬಾರದು’ ಎಂದು ಪ್ರಶ್ನಿಸಿ ನೋಟಿಸ್ ಕಳಿಸಲಾಗಿದೆ. 7 ದಿನಗಳಲ್ಲಿ ಈ ನೋಟಿಸ್ಗೆ ಉತ್ತರ ನೀಡುವಂತೆ ದರ್ಶನ್ ಗೆ ಸೂಚಿಸಲಾಗಿದೆ.
ಕಲಬುರಗಿಯ ಶೇಖ್ ದರ್ಗಾದಲ್ಲಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದ ಆರು ಜನರ ವಿರುದ್ಧ ಕಲಬುರಗಿಯ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೊಹಮ್ಮದ್ ಅಫ್ಜಲುದ್ದೀನ್ ಜುನೈದಿ, ಮೊಹಮ್ಮದ್ ಕಿವಾಮೊದ್ದಿನ್ ಜುನೈದಿ, ತಾಹಿರ್ ಅಲ್ಲಾವುದ್ದಿನ್ ಜುನೈದಿ, ಫಕ್ರುದ್ದಿನ್ ಮಣಿಯಾಲ್, ರಿಜ್ವಾನ್ ಅಹ್ಮದ್ ಮತ್ತು ಮೌಲಾನ್ ಅಹ್ಮದ್ ವಿರುದ್ಧ ರಾಷ್ಟ್ರೀಯ ಧ್ವಜಕ್ಕೆ ಅವಮಾನ ತಡೆಗಟ್ಟುವ ಕಾಯ್ದೆ 1971 ಯು/ಎಸ್ 2 ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಜನವರಿ 10ರಂದು ಶೇಖ್ ದರ್ಗಾದಲ್ಲಿ ಜುನೈದಿ ಎಂಬುವರ ಹುಟ್ಟು ಹಬ್ಬ ಆಚರಣೆ ಮಾಡಲಾಗಿತ್ತು. ಹುಟ್ಟು ಹಬ್ಬ ಪ್ರಯುಕ್ತ ಸಾಮೂಹಿಕ ವಿವಾಹ ಆಯೋಜಿಸಲಾಗಿತ್ತು. ಈ ವೇಳೆ ಮುಸ್ಲಿಂ ಧ್ವಜದ ಕೆಳಗಡೆ ರಾಷ್ಟ್ರಧ್ವಜ ಇಟ್ಟು ಆರೋಹಣ ಮಾಡಲಾಗಿತ್ತು.
Advertisement