
ಹಂಪಿ: ಭಕ್ತರು ದೇವಾಲಯದ ಆನೆಗೆ ಅತಿಯಾಗಿ ಬಾಳೆಹಣ್ಣು ತಿನ್ನಿಸುತ್ತಿದ್ದಾರೆ ಮತ್ತು ಪೂಜಾ ಸ್ಥಳವು ಬಾಳೆಹಣ್ಣಿನ ಸಿಪ್ಪೆಯಿಂದ ತುಂಬಿಹೋಗುತ್ತಿರುವುದರಿಂದ ಹಂಪಿಯಲ್ಲಿರುವ 7ನೇ ಶತಮಾನದ ಶಿವನ ದೇಗುಲವು ತನ್ನ ಆವರಣದೊಳಗೆ ಬಾಳೆಹಣ್ಣುಗಳನ್ನು ನಿಷೇಧಿಸಿದೆ.
ದೇವಸ್ಥಾನ, ಆನೆ ಹಾಗೂ ಭಕ್ತರ ಹಿತದೃಷ್ಟಿಯಿಂದ ಬಾಳೆಹಣ್ಣಿಗೆ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ವಿರೂಪಾಕ್ಷ ದೇವಸ್ಥಾನದ ಆಡಳಿತ ಮಂಡಳಿ ಗುರುವಾರ ತಿಳಿಸಿದೆ.
'ಭಕ್ತರು ಉತ್ಸಾಹದಿಂದ ಆನೆಗೆ ಅತಿಯಾಗಿ ಆಹಾರ ನೀಡುವ ಪ್ರಯತ್ನದಲ್ಲಿರುವುದನ್ನು ನಾವು ನೋಡಿದ್ದೇವೆ. ಇದು ಆನೆಗೆ ಹಾನಿಕಾರಕ ಮಾತ್ರವಲ್ಲ, ಈ ಇದು ಸ್ಥಳವನ್ನು ತುಂಬಾ ಕೊಳಕು ಮಾಡುತ್ತದೆ. ಭಕ್ತರು ಬಾಳೆಹಣ್ಣಿನ ಸಿಪ್ಪೆಗಳು ಮತ್ತು ಅವರು ಬಾಳೆಹಣ್ಣುಗಳನ್ನು ತಂದ ಪ್ಲಾಸ್ಟಿಕ್ ಚೀಲಗಳನ್ನು ಸಹ ಇಲ್ಲಿಯೇ ಬಿಡುತ್ತಾರೆ' ಎಂದು ದೇವಸ್ಥಾನದ ದತ್ತಿ ಅಧಿಕಾರಿ ಹನುಮಂತಪ್ಪ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದರು.
ಬಾಳೆಹಣ್ಣನ್ನು ನಿಷೇಧಿಸಿರುವ ಕುರಿತು ವರದಿಗಳು ಹೊರಬಂದಾಗಿನಿಂದ, ಈ ಬಗ್ಗೆ ಕೇಳಲು ಸಾಕಷ್ಟು ಕರೆಗಳು ಬರುತ್ತಿವೆ. ಬಾಳೆಹಣ್ಣು ನಿಷೇಧವನ್ನು ನಿಮ್ಮ ಸಂದರ್ಭಕ್ಕೆ ತಕ್ಕಂತೆ ತೆಗೆದುಕೊಂಡು ವಿವಾದ ಮಾಡಬೇಡಿ ಎಂದು ಹನುಮಂತಪ್ಪ ಮನವಿ ಮಾಡಿದರು.
'ಇದು ಸ್ಥಳೀಯ ವಿಷಯವಾಗಿದ್ದು, ನಮ್ಮ ದೇವಸ್ಥಾನದ ಆವರಣದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾವು ನಿರ್ಧಾರ ತೆಗೆದುಕೊಂಡಿದ್ದೇವೆ' ಎಂದು ಹನುಮಂತಪ್ಪ ಹೇಳಿದರು.
ವಿರೂಪಾಕ್ಷ ದೇವಾಲಯವನ್ನು ಸಾಮಾನ್ಯವಾಗಿ 'ದಕ್ಷಿಣ ಕಾಶಿ' ಎಂದು ಕರೆಯಲಾಗುತ್ತದೆ ಮತ್ತು ಇಲ್ಲಿಗೆ ಪ್ರತಿದಿನ ಕನಿಷ್ಠ 5,000 ಭಕ್ತರು ಭೇಟಿ ನೀಡುತ್ತಾರೆ. ವಿಶೇಷ ದಿನಗಳು ಮತ್ತು ವಾರಾಂತ್ಯಗಳಲ್ಲಿ, ಜನಸಂದಣಿಯು ಮತ್ತಷ್ಟು ಹೆಚ್ಚಾಗುತ್ತದೆ. ಆಗ ದಿನಕ್ಕೆ 50,000 ಸಹ ತಲುಪುತ್ತದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
Advertisement